ಯಹೂದ್ಯರ ಆರಾಧನಾಲಯದ ಪುನರ್ನಿರ್ಮಾಣಕ್ಕೆ ಅರಬ್‌ರಿಂದ ಕಟ್ಟಿಗೆಯ ಕೊಡುಗೆ

Update: 2016-12-03 09:48 GMT

ಹೈಫಾ(ಇಸ್ರೇಲ್),ಡಿ.3: ಕಳೆದ ವಾರ ಇಸ್ರೇಲ್‌ನ ಹೆಚ್ಚಿನ ಭಾಗದಲ್ಲಿ ಕಾಣಿಸಿ ಕೊಂಡಿದ್ದ ಕಾಳ್ಗಿಚ್ಚಿನಿಂದಾಗಿ ತೀವ್ರ ಹಾನಿಗೊಳಗಾಗಿರುವ ಯಹೂದ್ಯರ ಆರಾಧನಾಲಯದ ಪುನರ್ನಿರ್ಮಾಣಕ್ಕೆ ಅರಬ್ ಇಸ್ರೇಲಿಗಳು ಮರಮಟ್ಟುಗಳ ಕೊಡುಗೆಯನ್ನು ನೀಡಲು ಮುಂದಾಗಿದ್ದಾರೆ.

ಮರಮಟ್ಟುಗಳ ವ್ಯಾಪಾರಿಗಳಾಗಿರುವ ವಾಲಿದ್ ಅಬು ಅಹ್ಮದ್ ಮತ್ತು ಝಿಯಾದ್ ಯೂನಿಸ್ ಅವರು ಬಂದರು ನಗರಿ ಹೈಫಾದಲ್ಲಿರುವ ಸಾಂಪ್ರದಾಯಿಕ ಮೋರಿಯ್ಹಾ ಆರಾಧನಾಲಯದ ಪುನರ್ನಿರ್ಮಾಣಕ್ಕೆ ಮರಮಟ್ಟುಗಳ ಕೊಡುಗೆಯೊಂದಿಗೆ ಉಚಿತವಾಗಿ ಕಾರ್ಮಿಕರನ್ನೂ ಒದಗಿಸುತ್ತಿದ್ದಾರೆ.

 ಇಸ್ರೇಲ್‌ನ ಏಕೈಕ ಸಂಪ್ರದಾಯಿಕ ಯಹೂದಿ ಆರಾಧನಾಲಯವಾಗಿರುವ ಮೋರಿಯ್ಹ ಕಾಳ್ಗಿಚ್ಚಿನಿಂದಾಗಿ ಹೆಚ್ಚುಕಡಿಮೆ ಸಂಪೂರ್ಣವಾಗಿ ನಾಶಗೊಂಡಿದೆ. ಕಟ್ಟಡದ ಕೆಲವು ಭಾಗಗಳಷ್ಟೇ ಉಳಿದುಕೊಂಡಿದ್ದು, ಸುಮಾರು 4,000 ಪುಸ್ತಕಗಳು ಸುಟ್ಟು ಭಸ್ಮವಾಗಿವೆ.

ಆರಾಧನಾಲಯದ ಪುನರ್ನಿರ್ಮಾಣದ ಹೊಣೆಯನ್ನು ಹೊತ್ತಿರುವ ರಬ್ಬಿ(ಮೇಲ್ವಿಚಾರಕ) ಡವ್ ಹಯೂನ್ ಅವರು ಅದಕ್ಕಾಗಿ ಅಂದಾಜು ಯೋಜನೆಯನ್ನು ರೂಪಿಸುವಂತೆ ಅಬು ಅಹ್ಮದ್‌ರನ್ನು ಕೇಳಿಕೊಂಡಿದ್ದರು. ಆದರೆ ತಮ್ಮ ಸೇವೆಯನ್ನು ಉಚಿತವಾಗಿ ನೀಡುವುದಾಗಿ ವ್ಯಾಪಾರಿಗಳು ಹೇಳಿದಾಗ ಹಯೂನ್‌ಗೆ ಒಂದು ಕ್ಷಣ ತಮ್ಮ ಕಿವಿಗಳನ್ನೇ ನಂಬಲಾಗಿರಲಿಲ್ಲ. ಅವರು ಹೇಳಿದ್ದನ್ನು ಕೇಳಿ ತನ್ನ ಕಣ್ಣುಗಳು ತುಂಬಿ ಬಂದವು ಎಂದು ಅವರು ಹೇಳಿದರು.

ಯಹೂದಿಗಳ ಆರಾಧನಾಲಯಕ್ಕೆ ಮುಸ್ಲಿಮರು ಕೊಡುಗೆ ನೀಡುವುದಾಗಿ ಹೇಳಿದ್ದನ್ನು ಕೇಳಿ ನನ್ನಲ್ಲಿ ಭಾವನೆಗಳು ಉಕ್ಕಿ ಬಂದಿದ್ದವು. ಅವರಿಗೆ ವೈಯಕ್ತಿಕವಾಗಿ ಧನ್ಯವಾದ ಸಲ್ಲಿಸಲು ಅವರನ್ನು ಪ್ರಾರ್ಥನೆಗೆ ಆಹ್ವಾನಿಸಿದ್ದೇನೆ ಎಂದರು.

ತನ್ನ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅಬು ಅಹ್ಮದ್,ಹೈಫಾದಲ್ಲಿ ಯಹೂದಿಗಳು ಮತ್ತು ಅರಬ್ಬರು ಒಂದಾಗಿ ಬಾಳುತ್ತಿದ್ದಾರೆ. ಈ ಸಹಜೀವನವನ್ನು ನಾವು ಹೀಗೆಯೇ ಮುಂದುವರಿಸಬೇಕು ಮತ್ತು ಶಾಂತಿಯನ್ನು ಉತ್ತೇಜಿಸಬೇಕು ಎಂದರು.

ಇಸ್ಲಾಮ್ ಕ್ಷಮಾಶೀಲ ಧರ್ಮವಾಗಿದೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News