ರಿಸರ್ವ್ ಬ್ಯಾಂಕ್ ಗವರ್ನರ್ ಗೆ ತುರ್ತು ಸಂದೇಶ ಕಳಿಸಿದ ನಾಯ್ಡು

Update: 2016-12-03 11:00 GMT

ಹೈದರಾಬಾದ್,ಡಿ.3: ಎಲ್ಲ ರಾಜ್ಯಗಳು ನಗದುರಹಿತ ವಹಿವಾಟುಗಳೊಂದಿಗೆ ಡಿಜಿಟಲ್ ಆರ್ಥಿಕತೆಯನ್ನು ಅಪ್ಪಿಕೊಳ್ಳಬೇಕು ಎಂದು ಬಯಸಿರುವ ಪ್ರಧಾನಿ ನರೇಂದ್ರ ಮೋದಿಯವರು ಈ ರೂಪಾಂತರದ ಉಸ್ತುವಾರಿಗಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಸಭೆಯು ಗುರುವಾರ ರಾತ್ರಿ ನಡೆದಿತ್ತು. ಆದರೆ ನಾಯ್ಡು ಮಾತ್ರ ತೀರ ಉದ್ವಿಗ್ನತೆಯಲ್ಲಿದ್ದರು. ಸ್ವಂತ ರಾಜ್ಯ ಆಂಧ್ರಪ್ರದೇಶದಲ್ಲಿ ನೌಕರರ ವೇತನಗಳನ್ನು ಮತ್ತು ಪಿಂಚಣಿಗಳನ್ನು ನೀಡಲು ಹಣವೇ ಇರಲಿಲ್ಲ. ಇದೇ ಕಳವಳದಲ್ಲಿದ್ದ ನಾಯ್ಡು ತಡರಾತ್ರಿ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ತುರ್ತು ಸಂದೇಶವೊಂದನ್ನು ರವಾನಿಸಿದ್ದರು.

ನಾಯ್ಡು ಸಂದೇಶಕ್ಕೆ ಸ್ಪಂದಿಸಿದ ಪಟೇಲ್ ಶುಕ್ರವಾರವೇ ವಿಶೇಷ ವಿಮಾನಗಳ ಮೂಲಕ ವಿಶಾಖಪಟ್ಟಣ ಮತ್ತು ತಿರುಪತಿಗೆ 2,420 ಕೋ.ರೂ.ಗಳನ್ನು ರವಾನಿಸಿದ್ದಾರೆ. ರಸ್ತೆ ಮಾರ್ಗವಾಗಿ ರಾಜ್ಯದ ಎಲ್ಲ ಕಡೆಗಳಿಗೆ ಹಣ ತಲುಪಿಸಲು ನಾವು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇವೆ. ಎಲ್ಲ ವರ್ಗಗಳ ಜನರಿಗಾಗಿ ಹಣವನ್ನು ಸಿದ್ಧವಾಗಿರಿ ಸುವಂತೆ ನಾವು ಬ್ಯಾಂಕರ್‌ಗಳಿಗೆ ಸೂಚಿಸಿದ್ದೇವೆ ಎಂದು ನಾಯ್ಡು ಹೇಳಿದರು.

ಹಣದ ಕೊರತೆಯಿಂದಾಗಿ ತೀವ್ರ ಕಂಗೆಟ್ಟಿರುವ ರಾಜ್ಯಗಳಿಗೆ ತಲಾ 240 ಕೋ. ಮತ್ತು ಇತರ ಜಿಲ್ಲೆಗಳಿಗೆ ತಲಾ 160 ಕೋ.ರೂ.ಗಳನ್ನು ರವಾನಿಸಲಾಗಿದೆ ಎಂದು ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ತಿಳಿಸಿದರು.

ಪಿಂಚಣಿ ಸೇರಿದಂತೆ ರಾಜ್ಯ ಸರಕಾರದ ನೌಕರರಿಗೆ ಮಾಸಿಕ ವೇತನದ ಒಟ್ಟು ಮೊತ್ತ 3,000 ಕೋ.ರೂ.ಗಳಾಗುತ್ತವೆ. ಸಾರ್ವಜನಿಕ ಕ್ಷೇತ್ರದ ಉದ್ಯಮಗಳು ಮಾಸಿಕ 2,000 ಕೋ.ರೂ.ಗಳನ್ನು ವೇತನದ ರೂಪದಲ್ಲಿ ಪಾವತಿಸುತ್ತವೆ. ಕಲ್ಯಾಣ ಯೋಜನೆಗಳಡಿ ಮಾಸಿಕ ಪಾವತಿ 450 ಕೋ.ರೂ.ಗಳಾಗಿವೆ.

ರಾಜ್ಯ ಸರಕಾರದ ವೇತನಗಳ ಪಾವತಿಗಾಗಿ ಡಿ.1ರೊಳಗೆ 3,000 ಕೋ.ರೂ.ಗಳನ್ನು ಲಭ್ಯವಾಗಿಸುವುದಾಗಿ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವೈಫಲ್ಯಕ್ಕಾಗಿ ನಾಯ್ಡು ಅವರು ಆರ್‌ಬಿಐ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನವನ್ನು ತೋಡಿಕೊಂಡರು ಎಂದು ಮೂಲಗಳು ತಿಳಿಸಿದವು.

 ಬಿಕ್ಕಟ್ಟನ್ನು ಎದುರಿಸಲು ಸಮರೋಪಾದಿಯಲ್ಲಿ ಹಣ ರವಾನೆಯಾಗುವಂತಾಗಲು ನಾಯ್ಡು ಅವರು ಮಧ್ಯಪ್ರವೇಶ ಮಾಡಬೇಕಾಗಿ ಬಂದಿತ್ತು. ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಮಹಿಳೆಯರು ಬ್ಯಾಂಕುಗಳಿಂದ ಸಣ್ಣ ಸಣ್ಣ ಮೊತ್ತಗಳನ್ನೂ ಪಡೆಯಲು ಸಮಸ್ಯೆಗಳನ್ನೆದುರಿಸುತ್ತಿದ್ದಾರೆ ಎಂದು ಪೌರಾಡಳಿತ ಸಚಿವ ಪಿ.ನಾರಾಯಣ ಅವರು ಹೇಳಿದರು.

 5000 ಕೋ.ರೂ.ಬೇಡಿಕೆಗೆ ಹೋಲಿಸಿದರೆ ಕೇವಲ ಸುಮಾರು 1,300 ಕೋ.ರೂ.ಗಳನ್ನು ಕೈಯಲ್ಲಿಟ್ಟುಕೊಂಡಿರುವ ರಾಜ್ಯದಲ್ಲಿಯ ಬ್ಯಾಂಕುಗಳು ಪರಿಸ್ಥಿತಿಯನ್ನು ನಿಭಾಯಿಸಲು ಪರದಾಡುತ್ತಿವೆ. 3,000 ಕೋ.ರೂ.ಗಳನ್ನು ರವಾನಿಸುವುದಾಗಿ ಆರ್‌ಬಿಐ ಭರವಸೆ ನೀಡಿದ ನಂತರ ಸರಕಾರವು ಸಾಮಾಜಿಕ ಸುರಕ್ಷಾ ಪಿಂಚಣಿ(ಕಲ್ಯಾಣ ಯೋಜನೆ)ಗಳನ್ನು ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಿತ್ತು ಎಂದು ಟ್ರೆಝರಿ ಅಧಿಕಾರಿಯೋರ್ವರು ಹೇಳಿದರು.

ಡಿ.1-2ರಂದು ಸರಕಾರಿ ನೌಕರರು ತಮ್ಮ ವೇತನದ ಖಾತೆಗಳಿಂದ ತಮ್ಮ ‘ಹಕ್ಕಿನ’ 10,000 ರೂ.ಗಳನ್ನು ಹಿಂಪಡೆದುಕೊಂಡ ಬಳಿಕ ಬ್ಯಾಂಕುಗಳು ಖಾಲಿಯಾಗಿ ಕುಳಿತಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News