ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಿಮ್ಯುಲೇಶನ್ ಪದ್ದತಿ ಅಳವಡಿಕೆಗೆ ಕ್ರಮ: ಡಾ.ಸಚ್ಚಿದಾನಂದ

Update: 2016-12-03 10:29 GMT

ಮಂಗಳೂರು, ಡಿ.3: ಎಲ್ಲಾ ವೈದ್ಯಕೀಯ ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳ ಅನುಭವ ಗಳಿಕೆಗೆ, ಕಲಿಕೆಗೆ ಸಿಮ್ಯುಲೇಶನ್ ವ್ಯವಸ್ಥೆ ಪರಿಣಾಮಕಾರಿಯಾಗಿದೆ. ರಾಜ್ಯದ ಎಲ್ಲಾ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲೂ ಸಿಮ್ಯುಲೇಶನ್ ಪದ್ಧತಿ ಅಳವಡಿಸುವ ಚಿಂತನೆ ಇದೆ ಎಂದು ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಎಸ್.ಸಚ್ಚಿದಾನಂದ ಹೇಳಿದ್ದಾರೆ.

ನಗರದ ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ಮತ್ತು ಮೆಕ್ಯುಲಾ ಹೆಲ್ತ್‌ಕೇರ್ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಭಾರತದಲ್ಲೇ ಮೊದಲ ಅಂತಾರಾಷ್ಟ್ರೀಯ ಆರೋಗ್ಯ ಸುರಕ್ಷಾ ಸಿಮ್ಯುಲೇಶನ್ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪ್ರಸಕ್ತ ವೈದ್ಯಕೀಯ ಅಧ್ಯಯನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಾಕ್ಟಿಕಲ್ ತರಗತಿಗಳಲ್ಲಿ ನೈಜ ಮಾನವ ದೇಹವನ್ನು ಬಳಸಿಕೊಂಡು ಅಧ್ಯಯನ ನಡೆಸುವುದು ಹೆಚ್ಚು ಕ್ಲಿಷ್ಟಕರ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಕನಿಷ್ಠ ಕಾಲಾವಧಿಯಲ್ಲಿ ಹೆಚ್ಚು ಮಾಹಿತಿಯನ್ನು ಪಡೆಯಲು ಮಾನವರ ದೇಹದ ಸಂರಚನೆಯನ್ನು ಹೋಲುವ ನಕಲಿ ಆಕೃತಿಗಳಿಂದ (ಮಾದರಿಗಳಿಂದ) ಅಭ್ಯಸಿಸುವ ನಿಟ್ಟಿನಲ್ಲಿ ಸಿಮ್ಯುಲೇಶನ್ ಪದ್ಧತಿ ಹೆಚ್ಚು ಪರಿಣಾಮಕಾರಿ. ವೈದ್ಯಕೀಯ ರಂಗದಲ್ಲಿ ಬೆಳೆಯುತ್ತಿರುವ ತಾಂತ್ರಿಕತೆಯಿಂದ ಸಮರ್ಪಕವಾಗಿ ಬಳಸಿ ಭವಿಷ್ಯದಲ್ಲಿ ವೈದ್ಯಕೀಯ ಅಧ್ಯಯನ ಸಂದರ್ಭ ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಹೆಚ್ಚಿನ ಎಚ್ಚರ ವಹಿಸಬೇಕು. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸಿಮ್ಯುಲೇಶನ್ ಪದ್ಧತಿ ಮುಂದಿನ ದಿನಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಚ್ಚ್ಚಿದಾನಂದ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್‌ನ ನಿರ್ದೇಶಕ ವಂ.ಫ್ಯಾಟ್ರಿಕ್ ರೋಡ್ರಿಗಸ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಯೆನೆಪೊಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಎಂವಿಜಯ ಕುಮಾರ್, ಏಷ್ಯಾ ಫೆಸಿಫಿಕ್ ಸಿಎಇಯ ನಿರ್ದೇಶಕ ಗ್ಯಾರಿ ಇವ್ಸ್, ಸ್ಟ್ರೇಲಿಯಾ ಹೆಲ್ತ್ ಕೇರ್ ಸಿಮ್ಯುಲೇಸನ್ ಸೊಸೈಟಿಯ ಅಧ್ಯಕ್ಷ ಪ್ರೊ.ರಾಬರ್ಟ್ ಓಬ್ರಿಯನ್, ಕ್ಲಿನಿಕಲ್ ಹೆಲ್ತ್ ಕೇರ್ ಮ್ಯಾನೇಜರ್ ಅಮಾಂಡ ವಿಲ್ಫ್ರೆಡ್ ಮೊದಲಾದವರು ಉಪಸ್ಥಿತರಿದ್ದರು.

ಡೀನ್ ಜಯಪ್ರಕಾಶ್ ಆಳ್ವ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News