ಆಟೊ ಸೇವೆಗೆ ಶೀಘ್ರ ‘ಕಾಲ್ ಸೆಂಟರ್’

Update: 2016-12-03 11:24 GMT

ಮಂಗಳೂರು, ಡಿ.3: ಸ್ಮಾರ್ಟ್ ಸಿಟಿ ಘೋಷಣೆಯಾಗಿರುವ ಮಂಗಳೂರಿನಲ್ಲಿ ಸ್ಮಾರ್ಟ್ ಡ್ರೈವರ್ಸ್‌ ರೂಪಿಸುವ ಸಲುವಾಗಿ ಕುಡ್ಲ ಸೌಹಾರ್ದ ಸಹಕಾರಿ ವತಿಯಿಂದ ಶೀಘ್ರ ಕಾಲ್‌ಸೆಂಟರ್ ತೆರೆಯುವ ಯೋಜನೆಯಿದ್ದು, ಇದರಿಂದ ಗ್ರಾಹಕರು ಕರೆದಲ್ಲಿಗೆ ಸೇವೆಯನ್ನು ನೀಡಲಾಗುವುದು ಎಂದು ಸಹಕಾರಿಯ ಅಧ್ಯಕ್ಷ ಪ್ರಕಾಶ್ ವಿ.ಎನ್. ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 ಅಟೋಗಳಲ್ಲಿ ಇಸ್ರೋ ಸಂಸ್ಥೆ ಆವಿಷ್ಕರಿಸಿದ ನಾವಿಕ್ ಸ್ವದೇಶಿ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಈಗಾಗಲೇ 200 ಅಟೋಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಕನಿಷ್ಟ 500 ಅಟೋಗಳಿಗೆ ಅಳವಡಿಸುವ ಪ್ರಯತ್ನ ನಡೆಸಲಾಗುವುದು. ಅಲ್ಲದೆ ಇದರ ಜಾಹೀರಾತುಗಳ ಅಳವಡಿಕೆಯಿಂದ ಚಾಲಕರಿಗೆ ತಿಂಗಳಿಗೆ 1,500 ರೂ. ಆದಾಯ ಬರುತ್ತದೆ ಎಂದು ಪ್ರಕಾಶ್ ಹೇಳಿದರು.

ರಿಕ್ಷಾ ಚಾಲಕರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ ಅವರ ಕುಟುಂಬ ವರ್ಗಕ್ಕೆ ಸಾಮಾಜಿಕ ಸುರಕ್ಷತೆ ನೀಡುವ ಬಗ್ಗೆ ಸಂಸ್ಥೆಯು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರಸ್ತುತ ‘ಟೆಲಿಮ್ಯಾಟ್ರಿಕ್ಸ್ ಫಾರ್ ಯೂ’ ಸಂಸ್ಥೆಯು ‘ಆಟೋ ಕಮ್ಯುನಿಟಿ ಎಂಪವರ್‌ಮೆಂಟ್’ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆ ಮೂಲಕ ಚಾಲಕರ ಆರ್ಥಿಕಾಭಿವೃದ್ಧಿಗೆ ಅನೇಕ ಸೌಲಭ್ಯಗಳನ್ನು ಸಂಸ್ಥೆ ನೀಡಲಿದೆ ಎಂದು ತಿಳಿಸಿದರು.

ಆಟೋಗಳಲ್ಲಿ ಟ್ಯಾಬ್ ಅಳವಡಿಸುವ ಯೋಜನೆಯಿದ್ದು, ಇದರಿಂದ ನಗರದ ಆಸ್ಪತ್ರೆಗಳು, ದೇವಸ್ಥಾನ, ಪ್ರವಾಸಿ ಕೇಂದ್ರಗಳ ಮಾಹಿತಿ ದೊರೆಯಲಿದೆ. ಮುಂದಿನ ದಿನಗಳಲ್ಲಿ ಕ್ಯಾಶ್‌ಲೆಸ್ ಸೌಲಭ್ಯವನ್ನು ಆಟೋಗಳು ಹೊಂದಲಿದೆ ಎಂದು ಪ್ರಕಾಶ್ ತಿಳಿಸಿದರು.

ಈ ಎಲ್ಲ ಯೋಜನೆಗಳ ಬಗ್ಗೆ ಮತ್ತು ಆಟೋಗಳಲ್ಲಿ ಜಿಪಿಎಸ್ ಹಾಗೂ ಜಾಹೀರಾತು ಲಕ ಅಳವಡಿಕೆಯ ಕುರಿತು ಡಿ.6ರಂದು ಬೆಳಗ್ಗೆ 10:30ಕ್ಕೆ ನಗರದ ಜೈಲ್‌ರಸ್ತೆಯಲ್ಲಿರುವ ನಾಸಿಕ್ ಭವನ ಸಭಾಭವನದಲ್ಲಿ ಸಾರ್ವಜನಿಕ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಾಶ್ ಹೇಳಿದರು.

ವಿವಿಧ ರಿಕ್ಷಾ ಯೂನಿಯನ್‌ಗಳ ಮುಖಂಡರಾದ ಆಲ್ಫೋನ್ಸ್ ಡಿಸೋಜ, ಅಶೋಕ್ ಕೊಂಚಾಡಿ, ವಿನ್ಸೆಂಟ್ ಗೋವಿಯಸ್, ಪ್ರಕಾಶ್ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News