ಮೂಢನಂಬಿಕೆ ತಡೆಯಲು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ : ಸಚಿವ ರಮಾನಾಥ ರೈ

Update: 2016-12-03 11:50 GMT

ಪುತ್ತೂರು, ಡಿ.3 : ಮೂಡನಂಬಿಕೆಗಳಿಗೆ ಸಮಾಜದ ಮೇಲೆ ಕೆಲವೊಂದು ಕೆಟ್ಟ ಪರಿಣಾಮಗಳಾಗುತ್ತಿದ್ದು , ಇದರಿಂದ ಸಾಮಾಜಿಕ ಸಮಸ್ಯೆಗಳಾಗುತ್ತಿವೆ. ಇದನ್ನು ತಡಯಲು ವಿದ್ಯಾರ್ಥಿ ಜೀವನದಲ್ಲಿಯೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ಅವರು  ಪುತ್ತೂರಿನ ಸುದಾನ ವಸತಿಯುತ ಶಾಲೆಯಲ್ಲಿ ‘ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ-ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ’ ಎಂಬ ವಿಚಾರದಲ್ಲಿ 3 ದಿನಗಳ ಕಾಲ ನಡೆಯಲಿರುವ 24ನೇ ಅಖಿಲ ಕರ್ನಾಟಕ ರಾಜ್ಯ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ವೈಜ್ಞಾನಿಕ ಬೆಳವಣಿಗೆ ಸಾಕಷ್ಟು ಪ್ರಮಾಣದಲ್ಲಿ ನಡೆದಿದ್ದು, ವಿಜ್ಞಾನದ ಆವಿಷ್ಕಾರ ದಿನನಿತ್ಯ ನಡೆಯುತ್ತಿದೆ. ವಿಜ್ಞಾನದಿಂದ ಸಮಾಜಕ್ಕೆ ಸಾಕಷ್ಟು ಪ್ರಯೋಜನಗಳಾಗಿವೆ. ವೈಜ್ಞಾನಿಕ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಸುವ ಮೂಲಕ ಸಮಾಜಕ್ಕೆ ಸಾಕಷ್ಟು ಬುದ್ದಿಜೀವಿಗಳು ಅರ್ಪಣೆಯಾಗಲಿದ್ದಾರೆ.

ಎಳೆ ಪ್ರಾಯಗಳಲ್ಲಿ ವಿಜ್ಞಾನದ ಬೀಜ ಮೊಳೆಕೆಯೊಡೆದರೆ,  ಕಂದಾಚಾರ ತಡೆಯುವುದು ಮಾತ್ರವಲ್ಲದೆ ಪ್ರಗತಿಪರ ಚಿಂತನೆಗೆ ದಾರಿಯಾಗಲಿದೆ . ಸಮಾಜ ಹಿಂದುಳಿಯಲು ಕಂದಾಚಾರವೂ ಕಾರಣವಾಗಿದೆ. ವೈಚಾರಿಕ ಚಿಂತನೆಗಳನ್ನು ವಿರೋಧಿಸುವ ಮನೋಭಾವದ ಜನರು ನಮ್ಮಲ್ಲಿ ಸಾಕಷ್ಟಿದ್ದಾರೆ. ಕಲ್ಬುರ್ಗಿ ಅವರಂತರಹ ಮೇರು ವ್ಯಕ್ತಿಗಳ ಹತ್ಯೆಗೂ ಇದೇ ಕಾರಣವಾಗಿದೆ ಎಂದರು. 

ಮೂಢನಂಬಿಕೆಗೂ ನಂಬಿಕೆಗಳಿಗೂ ವ್ಯತ್ಯಾಸವಿದೆ . ಆದರೆ ನಂಬಿಕೆಯ ಹೆಸರಿನಲ್ಲಿ ನರಬಲಿಗಳು ನಡೆಯುತ್ತಿರುವುದು ಮೌಢ್ಯದಿಂದಾಗುವ ದುರಂತ. ಕೆಲವೊಂದು ಮೋಡಿ ಮಾಡುವ ಮೂಲಕ ನಾನೇ ದೇವರು ಎನ್ನುವ ಮನುಷ್ಯರೂ ನಮ್ಮ ನಡುವೆ ಇದ್ದಾರೆ. ಇದನ್ನು ನಂಬಿಕೊಂಡು ಅವರನ್ನು ಆರಾಧಿಸುವವರೂ ನಮ್ಮಲ್ಲಿದ್ದಾರೆ ಎಂದರು.

 ಮಕ್ಕಳ ಮನಸ್ಸು ದೇವರ ಮನಸ್ಸಿನಂತೆ, ಅಲ್ಲಿ ಮದ, ಮತ್ಸರ, ಲೋಭ, ಧ್ವೇಷ, ಜಾತೀಯತೆಗಳಿಲ್ಲ. ಅದರೆ ಬೆಳೆದ ಬಳಿಕ ಎಲ್ಲಾ ಯೋಚನೆಗಳು ನಮಗೆ ನೀಡಲಾಗುತ್ತಿದೆ. ಇಂತಹ ಸಾಮಾಜಿಕ ಪಿಡುಗು ತಡೆಯಲು ಮಕ್ಕಳಲ್ಲಿ ಆದುನಿಕ ವಿಚಾರವನ್ನು ಮೂಡಿಸಿ ಸುಂದರ ಸಮಾಜ ನಿರ್ಮಿಸುವ ಕೆಲಸವಾಗಬೇಕು ಎಂದರು.

ಸಮಾವೇಶದಲ್ಲಿ ಹಮ್ಮಿಕೊಳ್ಳಲಾದ ವಸ್ತು ಪ್ರದರ್ಶನವನ್ನು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಉದ್ಘಾಟಿಸಿದರು.

ತಾಂತ್ರಿಕಗೋಷ್ಠಿಯನ್ನು ದ.ಕ.ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಉದ್ಯೋಗ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಉದ್ಘಾಟಿಸಿದರು. ಡಾ. ರೇವತಿ ನಂದನ್ ಅವರ ‘ಇರುವೆ ಎಲ್ಲೆಲ್ಲೂ ಇರುವೆ; ಕೃತಿಯನ್ನು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಬಿಡುಗಡೆಗೊಳಿಸಿದರು.

ಪುತ್ತೂರು ಶಾಸಕಿ ಹಾಗೂ ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಾದ ಸುದಾನ ವಸತಿಯುತ ಶಾಲೆಯ ಶಾಮಿಲ್ ಅಬ್ಬಾಸ್, ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾಲಯದ ಇಂಚರ ಮತ್ತು ಅವಂತಿ ಹಾಗೂ ಉಜಿರೆ ಎಸ್‌ಡಿಎಂ ಪ್ರೌಢಶಾಲೆಯ ಋತು ಅವರನ್ನು ಸನ್ಮಾನಿಸಲಾಯಿತು.

ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ, ಪುತ್ತೂರು ಉಪವಿಭಾಗಾಧಿಕಾರಿ ಡಾ. ರಘುನಂದನ್, ರಾಜ್ಯ ಬಾಲವಿಜ್ಞಾನಿ ಪುರಸ್ಕೃತ ವಿದ್ಯಾರ್ಥಿ ಭರತ್‌ಕುಮಾರ್, ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ. ವಿಜಯ ಹಾರ್ವಿನ್, ಮುಖ್ಯಗುರು ಶೋಭಾ ನಾಗರಾಜ್, ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್ ದ.ಕ.ಜಿಲ್ಲಾಧ್ಯಕ್ಷ ಕಡಮಜಲು ಸುಭಾಷ್ ರೈ, ಕಾರ್ಯದರ್ಶಿ ಕರುಣಾಕರ ಸಿ.ಎಚ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಮುಖ್ಯಗುರು ಮನೋಹರ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಮ ಗೌಡ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ವಿಜ್ಞಾನ ಪರಿಷತ್‌ನ ಕಾರ್ಯದರ್ಶಿ ಟಿ.ಜಿ. ಪ್ರೇಂಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ಸ್ವಾಗತಿಸಿದರು. ಪ್ರೊ. ಬಿ.ಜೆ.ಸುವರ್ಣ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News