ಸಮಾಜವಾದಿ ಪಾರ್ಟಿ, ಕಾಂಗ್ರೆಸ್ ಒಟ್ಟಿಗೆ ಚುನಾವಣಾ ಕಣಕ್ಕಿಳಿದರೆ, 300 ಸೀಟು ಗೆಲ್ಲಬಹುದು: ಅಖಿಲೇಶ್
ಹೊಸದಿಲ್ಲಿ, ಡಿಸೆಂಬರ್ 3: ಉತ್ತರಪ್ರದೇಶದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಜೊತೆಗೂಡಿ ಚುನಾವಣೆ ಎದುರಿಸಿದರೆ 300ಕ್ಕೂ ಅಧಿಕ ಸೀಟುಗಳನ್ನು ಗೆಲ್ಲಲುಸಾಧ್ಯವಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆಂದು ವರದಿಯಾಗಿದೆ. ಕಾಂಗ್ರೆಸ್‌ನೊಂದಿಗೆ ಚುನಾವಣೆ ಹೊಂದಾಣಿಕೆ ನಡೆಸುವುದರ ಕುರಿತ ಸೂಚನೆಯನ್ನು ಅವರು ಈ ರೀತಿ ನೀಡಿದ್ದಾರೆ. ಇದೇ ವೇಳೆ ಅವರು ಬಹುಜನಸಮಾಜ ಪಕ್ಷದೊಂದಿಗೆ ಯಾವುದೇ ಚುನಾವಣಾ ಹೊಂದಾಣಿಕೆಯ ಸಾಧ್ಯತೆಯನ್ನು ನಿರಾಕರಿಸಿದ್ದಾರೆ.
ಕಾಂಗ್ರೆಸ್ ಕಡಿಮೆ ಸ್ಥಾನಕ್ಕೆ ಸ್ಪರ್ಧಿಸುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಪಾರ್ಟಿ ಲಾಭ ನಷ್ಟದ ಕುರಿತುಯೋಚಿಸಿದರೆ ಚುನಾವಣಾ ಮೈತ್ರಿ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಎಸ್ಪಿಯೊಂದಿಗೆ ಎಲ್ಲಿಯೂ ಚುನಾವಣಾ ಹೋರಾಟವೇ ಇಲ್ಲ ಆದ್ದರಿಂದ ಅದರೊಂದಿಗೆ ಹೊಂದಾಣಿಕೆ ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅಖಿಲೇಶ್ ಹೇಳಿದ್ದಾರೆ. ಇತ್ತೀಚೆಗೆ ಮಾಯಾವತಿ ಅಖಿಲೇಶ್ ಯಾದವ್‌ರನ್ನು ಕಟುವಾಗಿ ಟೀಕಿಸಿದ್ದರು. ಪ್ರಧಾನಿ ಮೋದಿಯವರನ್ನು ಟೀಕಿಸಿದ ಅಖಿಲೇಶ್ ನೋಟ್ ಅಮಾನ್ಯಗೊಳಿಸಿದ್ದರಿಂದಾಗಿ ಸಾಮಾನ್ಯ ಜನರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಧಾನಿ ಈ ಹೆಜ್ಜೆಯನ್ನು ತಮ್ಮ ವಿರೋಧಿಗಳನ್ನು ದಮನಿಸಲು ಇಟ್ಟಿದ್ದಾರೆ. ಜೊತೆಗೆ ತಮ್ಮದೇ ಪಾರ್ಟಿಯ ರಾಜ್ಯಸಭಾ ಸದಸ್ಯ ಅಮರ್‌ಸಿಂಗ್‌ರನ್ನು ಅಖಿಲೇಶ್ ಟೀಕಿಸಿದ್ದಾರೆಂದು ವರದಿ ತಿಳಿಸಿದೆ.