ನೋಟು ರದ್ದಾದ ಹಾಗೆ ಹಠಾತ್ತನೆ ನಿಮ್ಮ ಮೊಬೈಲಿಂದ ವಾಟ್ಸ್ ಆ್ಯಪ್ ಮಾಯವಾಗಲಿದೆ !

Update: 2016-12-03 11:52 GMT

ಹೊಸದಿಲ್ಲಿ, ಡಿ. 3 : ತಕ್ಷಣ ನಿಮ್ಮ ಮೊಬೈಲ್ ನೋಡಿ. ಅಲ್ಲಲ್ಲ, ಮೆಸೇಜ್ ಅಥವಾ ಇಮೇಲ್ ಚೆಕ್ ಮಾಡಲು ಅಲ್ಲ. ನಿಮ್ಮ ಮೊಬೈಲ್ ಎಷ್ಟು ಹಳೆಯದು ಎಂದು ತಿಳಿದುಕೊಳ್ಳಲು. ಏಕೆಂದರೆ ಖ್ಯಾತ ಮೆಸೇಜಿಂಗ್ ಆ್ಯಪ್  ವಾಟ್ಸ್ ಆ್ಯಪ್ ತನ್ನ ಬಳಕೆದಾರರಿಗೆ ಒಂದು ಶಾಕ್ ನೀಡುತ್ತಿದೆ. ಅದು ಈ ವರ್ಷದ ಅಂತ್ಯದೊಳಗೆ ಹಲವು ಸ್ಮಾರ್ಟ್ ಫೋನ್ ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲಿದೆ. ಅದರರ್ಥ ಮಿಲಿಯಗಟ್ಟಲೆ ಜನರ ಮೊಬೈಲ್ ನಲ್ಲಿ ವಾಟ್ಸ್ ಆ್ಯಪ್  ಸಿಗುವುದಿಲ್ಲ. 

ಪ್ರತಿ ತಿಂಗಳು ಒಂದು ಬಿಲಿಯಕ್ಕಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ ಆ್ಯಪ್ ತಾಂತ್ರಿಕ ಅಪ್ ಗ್ರೇಡ್ ಮಾಡಿಕೊಳ್ಳುವಾಗ ಅದಕ್ಕೆ ಸರಿಹೊಂದದ ಹಳೆಯ ಮೊಬೈಲ್ ಗಳಿಂದ ದೂರ ಸರಿಯಲಿದೆ. ಅಂದರೆ ವಾಟ್ಸ್ ಆ್ಯಪ್ ನ ಹೊಸ ತಾಂತ್ರಿಕತೆಗೆ, ನೂತನ ಫೀಚರ್ ಗಳಿಗೆ ಸೂಕ್ತವಾಗುವ ಕಾಂಫಿಗರೇಷನ್ ಇರುವ ಮೊಬೈಲ್ ಗಳಲ್ಲಿ ಮಾತ್ರ ಅದು ಲಭ್ಯವಿರಲಿದೆ. ಇದನ್ನು ವಾಟ್ಸ್ ಆ್ಯಪ್ ವಕ್ತಾರ ಖಚಿತಪಡಿಸಿದ್ದಾರೆ. 

ನಾವು ನಮ್ಮ ಮುಂದಿನ ಏಳು ವರ್ಷಗಳತ್ತ ನೋಡುವಾಗ , ಆಗ್ ಹೆಚ್ಚಿನ ಸಂಖ್ಯೆಯ ಜನರು ಬಳಸುವ ಮೊಬೈಲ್ ಗಳತ್ತ ನಮ್ಮ ಗಮನ ಕೇಂದ್ರೀಕರಿಸಲು ನಾವು ಬಯಸುತ್ತೇವೆ ಎಂದು ಈ ವಕ್ತಾರ ಹೇಳಿದ್ದಾರೆ. ಅಂದರೆ 2017 ರಿಂದ ಹಲವು ಹಳೆಯ ಮೊಬೈಲ್ ಗಳಲ್ಲಿ ವಾಟ್ಸ್ ಆ್ಯಪ್ ಸಿಗುವುದಿಲ್ಲ. 

ಐಫೋನ್ 3GS ಮೊಬೈಲ್ ಗಳಲ್ಲಿ ಹಾಗು iOS 6 ಇರುವ ಯಾವುದೇ ಉಪಕರಣದಲ್ಲಿ ವಾಟ್ಸ್ ಆ್ಯಪ್ ಲಭ್ಯತೆ ನಿಲ್ಲಲಿದೆ. ಅದೇ ರೀತಿ ಫರ್ಸ್ಟ್ , ಸೆಕಂಡ್ , ಥರ್ಡ್ ಹಾಗು ಫೋರ್ಥ್ ಜನರೇಷನ್ ನ ಅಪ್ ಡೇಟ್ ಆಗದ  ಐಪ್ಯಾಡ್ ಗಳಲ್ಲೂ ವಾಟ್ಸ್ ಆ್ಯಪ್ ಸಿಗುವುದಿಲ್ಲ. ಐಫೋನ್ ಬಳಕೆದಾರರು iOS 9.3 ಗೆ ಅಪ್ ಗ್ರೇಡ್ ಆಗಿ ವಾಟ್ಸ್ ಆ್ಯಪ್ ಬಳಸಬೇಕಾಗುತ್ತದೆ. 

ಆಂಡ್ರಾಯ್ಡ್ 2.1 ಅಥವಾ 2.2 ಗಳಿರುವ ಫೋನ್ ಹಾಗು ಟ್ಯಾಬ್ ಗಳಲ್ಲೂ ಈ ವರ್ಷಾಂತ್ಯದ ಬಳಿಕ ವಾಟ್ಸ್ ಆ್ಯಪ್ ಸಿಗುವುದಿಲ್ಲ. ವಿಂಡೋಸ್ 7 ಫೋನ್ ಗಳಲ್ಲೂ ಅಪ್ ಗ್ರೇಡ್ ಮಾಡಿಸದಿದ್ದರೆ ವಾಟ್ಸ್ ಆ್ಯಪ್ ಸಿಗದು. 

ಆದರೆ ಬ್ಲ್ಯಾಕ್ ಬೆರಿ ಆಪರೇಟಿಂಗ್ ಸಿಸ್ಟಮ್, ನೋಕಿಯಾ S40 ಹಾಗು ನೋಕಿಯಾ ಸಿಂಬಿಯನ್ S60 ಗಳಿಗೆ ವಾಟ್ಸ್ ಆ್ಯಪ್ ಜೂನ್ 30,2017 ರವರೆಗೆ ತನ್ನ ಸೇವೆಯನ್ನು ವಿಸ್ತರಿಸಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News