×
Ad

ಡಿ.10 ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸುಳ್ಯಕ್ಕೆ

Update: 2016-12-03 17:49 IST

ಸುಳ್ಯ, ಡಿ.3 :  ಅರೆಭಾಷೆ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಅಂದು ಸುಳ್ಯ ಸರಕಾರ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಲು ಚಿಂತನೆ ನಡೆದಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ತಿಳಿಸಿದ್ದಾರೆ.

ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವೆಂಕಪ್ಪ ಗೌಡರು, ಅರೆಭಾಷೆ ಅಕಾಡೆಮಿ ಮತ್ತು ಗೌಡ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯ ಮಂತ್ರಿಗಳು ಆಗಮಿಸುತ್ತಿದ್ದಾರೆ. ಸುಳ್ಯದಲ್ಲಿ 4.7 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿರುವ ಆಸ್ಪತ್ರೆಯನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸುವ ಚಿಂತನೆ ನಡೆದಿದ್ದು, ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದೇವೆ ಎಂದು ಹೇಳಿದರು.

ಕೊಳವೆ ಬಾವಿ ಕೊರೆಯಲು ಸರಕಾರ ನಿಷೇಧ ಹೇರಿರುವ ಹಿನ್ನಲೆಯಲ್ಲಿ ಈ ಭಾಗದಲ್ಲಿ ಕೊಳವೆ ಬಾವಿ ಕೊರೆಯಲು ಸಮಸ್ಯೆಯಾಗಿದೆ. ಇದರಿಂದ ಕೃಷಿಕರ ತೋಟಗಳು ಬತ್ತಿಹೋಗುವ ಆತಂಕವಿದೆ. ಈ ಹಿನ್ನಲೆಯಲ್ಲಿ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವಂತೆ ಮುಖ್ಯ ಸಚೇತಕ ಐವನ್ ಡಿಸೋಜ ರವರಲ್ಲಿ ವಿನಂತಿಸಿದ್ದೆವೆ. ಅವರು ಪ್ರಸ್ತಾಪಿಸಿದ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಗಳು ಈ ಆದೇಶದಿಂದ ಕರಾವಳಿ ಭಾಗಕ್ಕೆ ವಿನಾಯಿತಿ ನೀಡುವಂತೆ ಮೌಖಿಕವಾಗಿ ಹೇಳಿದ್ದರು. ಆದರೆ ಈ ಕುರಿತ ಲಿಖಿತ ಆದೇಶ ಬಂದಿಲ್ಲ. ಹಾಗಾಗಿ ಪುನಃ ನಾವು ಐವನ್ ಡಿಸೋಜ ರವರಲ್ಲಿ ಈ ಕುರಿತಂತೆ ಮನವಿ ಮಾಡಿದ್ದೇವೆ.

ಶಾಸಕ ಅಂಗಾರ ಅವರಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ವಿನಂತಿಸಿದ್ದೇನೆ. ಆದರೆ ಅವರು ಸದನದಲ್ಲಿ ಪ್ರಸ್ತಾಪಿಸಿದ ಬಗ್ಗೆ ತಿಳಿದಿಲ್ಲ ಎಂದು ವೆಂಕಪ್ಪ ಗೌಡರು ಹೇಳಿದರು.

ಸುಳ್ಯಕ್ಕೆ ಆಗಮಿಸಲಿರುವ, ಮುಖ್ಯ ಮಂತ್ರಿಗಳಿಗೆ ಕಿಸಾನ್ ಘಟಕದ ವತಿಯಿಂದ ಮನವಿ ಅರ್ಪಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಇತರ ನೀರಿನ ಮೂಲಕ್ಕೆ ತೊಂದರೆಯಾಗದಂತೆ ಯಾರಾದರು ಕೊಳವೆ ಬಾವಿ ಕೊರೆದರೆ ರಾಜಕೀಯ ಉದ್ದೇಶಕ್ಕಾಗಿ ಅದಕ್ಕೆ ವಿರೋಧ ಒಡ್ಡದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ವೆಂಕಪ್ಪ ಗೌಡರು ಹೇಳಿದರು.

ಮಡಪ್ಪಾಡಿ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ ಕೇಂದ್ರ ಸರಕಾರ ಧೋರಣೆಯಿಂದ ಸಹಕಾರ ಸಂಘಗಳಿಗೆ ಹಾಗೂ ಜನ ಜೀವನಕ್ಕೆ ತೀರಾ ತೊಂದರೆಯಾಗಿದೆ. ನೂರು ರೂಪಾಯಿಗೂ ಪರದಾಡುವಂತಹ ಸ್ಥಿತಿ ಎದುರಾಗಿದೆ. ಭ್ರಷ್ಠಾಚಾರ ನಿಗ್ರಹ ಒಳ್ಳೆಯ ವಿಚಾರ ಆದರೆ ದೇಶದಲ್ಲಿರುವವರೆಲ್ಲ ಭ್ರಷ್ಟರೇ ಎನ್ನುವ ರೀತಿ ಬಿಂಬಿತವಾಗುತ್ತಿದೆ ಎಂದು ಹೇಳಿದರು.

ಉಬರಡ್ಕದ ಕಿಂಡಿ ಅಣೆಕಟ್ಟು ಕುಸಿತ ಕುರಿತಂತೆ ಪ್ರತಿಕ್ರಿಯಿಸಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ್ ರವರು ಈ ಘಟನೆಗೆ ಬಿಜೆಪಿಯೇ ಹೊಣೆ. ಶಾಸಕರು ಹಾಗೂ ಬಿಜೆಪಿ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮಾತ್ರ ಸಮಾಲೋಚಿಸಿ ಇಂತಹ ಕಾಮಗಾರಿ ಮಾಡುತ್ತಾರೆ. ಸ್ಥಳೀಯರನ್ನು ವಿಶ್ವಸಕ್ಕೆ ತೆಗೆದುಕೊಂಡಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಅಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾದ ಜಾಗವು ಸೂಕ್ತವಾದುದಲ್ಲ ಕೇವಲ ಅವರ ಪಕ್ಷದ ಒಂದಿಬ್ಬರು ನಾಯಕರಿಗೆ ಬೇಕಾಗಿ ಅಲ್ಲಿ ನಿರ್ಮಾಣವಾಗಿದೆ. ಈ ಘಟನೆ ಕುರಿತಂತೆ ಸಮಗ್ರ ತನಿಖೆ ನಡೆಸಲು ನಾವು ಲೋಕಾಯುಕ್ತಕ್ಕೆ ಬರೆಯುತ್ತೇವೆ ಎಂದರಲ್ಲದೆ ಉಬರಡ್ಕ ರಸ್ತೆಯ ಅಭಿವೃದ್ದಿಗೂ ನಾಲ್ಕು ಲಕ್ಷ ಮಂಜೂರಾಗಿತ್ತು. ಆದರೆ ಕಾಟಾಚಾರದ ಕೆಲಸ ನಡೆದಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ನಾಯಕರಾದ ಸದಾನಂದ ಮಾವಜಿ ನಂದರಾಜ ಸಂಕೇಶ, ಧರ್ಮಪಾಲ ಕೊಯಿಂಗಾಜೆ ಪತ್ರಿಕಾಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News