ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು ಮತ್ತು ಪಿಡಿಒಗಳು ಹಾಗೂ ಅಧಿಕಾರಿಗಳ ಸಭೆ

Update: 2016-12-03 13:30 GMT

ಬಂಟ್ವಾಳ, ಡಿ. 3: ಗ್ರಾಮ ವಿಕಾಸ ಯೋಜನೆಯನ್ವಯ ಬಂಟ್ವಾಳ ತಾಲೂಕಿನ ಐದು ಗ್ರಾಮಗಳು ಆಯ್ಕೆಯಾಗಿದ್ದು ಈ ಯೋಜನೆಯಡಿ ಪ್ರತಿ ಗ್ರಾಮಕ್ಕೆ 75 ಲಕ್ಷ ರೂ. ಹಂಚಿಕೆಯಾಗಿದ್ದು 38.5 ಲಕ್ಷ ರೂ. ಈಗಾಗಲೇ ಬಿಡುಗಡೆಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ. ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಶನಿವಾರ ಮಧ್ಯಾಹ್ನ ಯೋಜನೆಗೆ ಆಯ್ಕೆಯಾದ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು ಮತ್ತು ಪಿಡಿಒಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಅಜ್ಜಿಬೆಟ್ಟು, ಬಡಗಬೆಳ್ಳೂರು, ಕಾವಳಮುಡೂರು, ಸಾಲೆತ್ತೂರು, ಕೊಯಿಲ ಗ್ರಾಮಗಳು ಆಯ್ಕೆಯಾಗಿದ್ದು ಆದ್ಯತೆಯ ಮೇರೆಗೆ ಇಲ್ಲಿನ ಸೂಚಿತ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಅವರು ಸೂಚಿಸಿದರು.

ಮಾರ್ಗ ಸೂಚಿಯಲ್ಲಿರುವಂತೆ ರಂಗಮಂದಿರ, ಕ್ರೀಡಾಂಗಣ, ಜಿಮ್, ಸೆಟ್‌ಲೈಟ್ ಸಂಪರ್ಕ ಸಹಿತ ಪ್ರಮುಖ ವಿಚಾರಗಳನ್ನು ಆದ್ಯತೆಯ ಮೇಲೆ ಕೈಗೊಂಡು ನಿಗದಿತ ಸಮಯಕ್ಕೆ ಪೂರ್ಣಗೊಳಿಸುವಂತೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ ಸಚಿವರು, ಪ್ರತಿ ತಿಂಗಳು ಈ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗುವುದು. ಸಮರ್ಪಕ ಅನುಷ್ಠಾನ ಕುರಿತು ಆಯಾ ಗ್ರಾಮಗಳಿಂದ ಆದ್ಯತಾ ಪಟ್ಟಿ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನರೇಂದ್ರಬಾಬು ಮಾರ್ಗಸೂಚಿಯ ವಿವರ ನೀಡಿ, ಗ್ರಾಮದೊಳಗಿನ ಪರಿಸರವನ್ನು ಉತ್ತಮ ಪಡಿಸಲು ರಸ್ತೆ, ಚರಂಡಿಗೆ ಅಂದಾಜು ಮೊತ್ತ 37.5 ಲಕ್ಷ ರೂಪಾಯಿ. ಗ್ರಂಥಾಲಯ, ಸಾಹಿತಿ, ಕಲಾವಿದರ ಸ್ಮಾರಕ, ಸಭಾಭವನ ಅಥವಾ ಬಯಲು ರಂಗಮಂದಿರ ನಿರ್ಮಾಣಕ್ಕೆ 9 ಲಕ್ಷ ರೂಪಾಯಿ. ಯುವಕ, ಯುವತಿ ಮಂಡಳಿಗಳ ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗೆ ಜಿಮ್, ಗರಡಿಮನೆ, ಫ್ಲಡ್ ಲೈಟ್ ಆಟದ ಮೈದಾನ, ದೇಶಿ ಕ್ರೀಡೆ ಅಭಿವೃದ್ಧಿ ಚಟುವಟಿಕೆಗಳಿಗೆ 9 ಲಕ್ಷ ರೂಪಾಯಿ. ಸೌರ ಬೆಳಕು ದೀಪಗಳ ಅಳವಡಿಕೆಗೆ 2.25 ಲಕ್ಷ ರೂಪಾಯಿ, ತಿಪ್ಪೆಗುಂಡಿಗಳ ವೈಜ್ಞಾನಿಕ ಸಂಸ್ಕರಣಾ ಘಟಕ ನಿರ್ಮಾಣಕ್ಕೆ 7.5 ಲಕ್ಷ ರೂಪಾಯಿ, ಗ್ರಾಮ ಪಂಚಾಯಿತಿ ನಡವಳಿಗಳನ್ನು ಟೆಲಿವಿಷನ್ ಮೂಲಕ ನೇರ ಪ್ರಸಾರ ಮಾಡುವ ಮೂಲಸೌಕರ್ಯಕ್ಕೆ 1.5 ಲಕ್ಷ. ರೂ, ಗುಡಿ, ಮಸೀದಿ, ಚರ್ಚ್, ಜೀರ್ಣೋದ್ಧಾರ, ಕಟ್ಟಡ ನಿರ್ಮಾಣಕ್ಕೆ 4.5 ಲಕ್ಷ ರೂಪಾಯಿ ಹಾಗೂ ಫ್ಲೆಕ್ಸಿ ಫಂಡ್ 3.75 ಲಕ್ಷ ರೂಪಾಯಿ ಒಟ್ಟು 75 ಲಕ್ಷ ರೂಪಾಯಿ ಕಾಮಗಾರಿಗಳನ್ನು ಗ್ರಾಮವಿಕಾಸ ಯೋಜನೆಯಡಿ ಮಾಡಬಹುದು ಎಂದು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮಂಗಳೂರು ವಿಭಾಗದ ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಗಣೇಶ್ ಅರಳೀಕಟ್ಟಿ, ಬಂಟ್ವಾಳ ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಆಯ್ಕೆಗೊಂಡ ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News