ಬಂದರು, ಜೆಟ್ಟಿ ಕಾಮಗಾರಿ ವಿಳಂಬದ ಬಗ್ಗೆ ಕೋಟ ಪ್ರಶ್ನೆ

Update: 2016-12-03 13:47 GMT

ಉಡುಪಿ, ನ.30: ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ವಾಣಿಜ್ಯ ಬಂದರು ಮತ್ತು ಜೆಟ್ಟಿ ನಿರ್ಮಾಣಕ್ಕಾಗಿ 2011-12ನೇ ವರ್ಷದಿಂದ 2014-15ರವರೆಗೆ ಮಂಗಳೂರು ಬಂದರಿನ ವಾಣಿಜ್ಯ ಧಕ್ಕೆಯ ಹೂಳೆತ್ತುವ ಕಾಮಗಾರಿಗೆ ಸುಮಾರು 13 ಕೋಟಿ ರೂ. ಬಿಡುಗಡೆಯಾಗಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದ್ದು, ಕೆಲಸ ಪ್ರಾರಂಭಿಸಬೇಕಾಗಿದೆ ಎಂದು ರಾಜ್ಯ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆದಿರುವ ವಿಧಾನಮಂಡಲದ ಅಧಿವೇಶನದಲ್ಲಿ ಇಂದು ವಿಧಾನಪರಿಷತ್‌ನಲ್ಲಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

 ಮಂಗಳೂರಿನ ಹಳೆಬಂದರಿನ 2ನೇ ಹಂತದ ದಕ್ಕೆ ನಿರ್ಮಾಣ ಕಾಮಗಾರಿ ಈ ವರ್ಷ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದವರು ಹೇಳಿದರು.

ಉಳಿದಂತೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ, ಮರವಂತೆ, ಕೊಡೇರಿ, ಅಳಿವೆಗದ್ದೆಗಳಲ್ಲಿ ಬ್ರೇಕ್ ವಾಟರ್ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿದ್ದು, ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ 102 ಕೋಟಿ ರೂ. ಅನುದಾನ ಮಂಜೂರಾಗಿದೆ.

ಬ್ರೇಕ್ ವಾಟರ್ ಕಾಮಗಾರಿಗೆ ತಳಪಾಯದ ಕೆಲಸ ಪ್ರಾರಂಭಿಸಲಾಗಿದೆ. ಮರವಂತೆಯಲ್ಲಿ ಕೇರಳ ಮಾದರಿಯ ನಾಡದೋಣಿಯ ತಂಗುದಾಣ ನಿರ್ಮಾಣಕ್ಕೆ 45 ಕೋಟಿ ರೂ. ಅನುದಾನ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಕೊಡೇರಿ ಮೀನುಗಾರಿಕಾ ಇಳಿದಾನ ಕೇಂದ್ರ ನಿರ್ಮಾಣ ಕಾಮಗಾರಿಗೆ 30 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಪೂರ್ಣ ಗೊಂಡು ಹಸ್ತಾಂತರಿಸಲಾಗಿದೆ.

 ಶಿರೂರು ಅಳಿವೆಗದ್ದೆಯ ಬಳಿ ಇಳಿದಾಣ ಹಾಗೂ ತಂಗುದಾಣದ ನಿರ್ಮಾಣಕ್ಕಾಗಿ 9.80 ಕೋಟಿ ರೂ.ಅನುದಾನ ಮಂಜೂರಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ ಎಂದು ಸಚಿವ ಡಾ.ಮಹಾದೇವಪ್ಪ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News