ಡಿ.4ರಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆ

Update: 2016-12-03 13:56 GMT

ಉಡುಪಿ, ಡಿ.2 :  ಚಿಕ್ಕಮಗಳೂರು ಜಿಲ್ಲೆ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರುದತ್ತಾತ್ರೇಯ ಸ್ವಾಮಿಯ ದತ್ತಪೀಠದಲ್ಲಿ ನಡೆಯುವ ದತ್ತ ಜಯಂತಿ ಸಲುವಾಗಿ ದತ್ತಮಾಲಾ ಅಭಿಯಾನಕ್ಕೆ ಡಿ.4ರಂದು ಉಡುಪಿಯಲ್ಲಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ ಎಂದು ಬಜರಂಗದಳದ ಪ್ರಾಂತ ಸಂಯೋಜಕರಾದ ಶರಣ್ ಪಂಪ್‌ವೆಲ್  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಬಾರಿಯ ದತ್ತಮಾಲಾ ಅಭಿಯಾನದಲ್ಲಿ ರಾಜ್ಯದಿಂದ ಸುಮಾರು 50ಸಾವಿರಕ್ಕೂ ಅಧಿಕ ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ. ಡಿ.4ರಂದು ಪ್ರಾರಂಭಗೊಳ್ಳುವ ಈ ಅಭಿಯಾನ ಡಿ.13ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನದೊಂದಿಗೆ ಸಮಾಪನಗೊಳ್ಳಲಿದೆ ಎಂದರು.

ಈ ಬಾರಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಗಳ ನ್ನೊಳಗೊಂಡ ಮಂಗಳೂರು ವಿಭಾಗದಿಂದ 20,000 ಮಂದಿ ಬಜರಂಗ ದಳದ ಕಾರ್ಯಕರ್ತರು ದತ್ತಪೀಠಕ್ಕೆ ತೆರಳಲಿದ್ದಾರೆ. ಡಿ.11ರಂದು ದತ್ತಪೀಠದಲ್ಲಿ ವಿವಿದ ಪೂಜೆ, ಹೋಮಗಳು, ಬೆಳಗ್ಗೆ ನಗರದಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ ಎಂದು ಶರಣ್ ತಿಳಿಸಿದರು.

ಡಿ.12ರಂದು ಚಿಕ್ಕಮಗಳೂರು ನಗರದಲ್ಲಿ ದತ್ತಮಾಲಾಧಾರಿಗಳಿಂದ ಶೋಭಾಯಾತ್ರೆ, ಧಾರ್ಮಿಕ ಸಭೆ ನಡೆಯಲಿದ್ದು, ಇದರಲ್ಲಿ ವಿಶ್ವಹಿಂದು ಪರಿಷತ್‌ನ ಅಖಿಲ ಭಾರತೀಯ ಸಹಕಾರ್ಯದರ್ಶಿ ಡಾ.ಸುರೇಂದ್ರ ಕುಮಾರ್ ಜೈನ್ ದಿಕ್ಸೂಚಿ ಮಾಡಲಿದ್ದಾರೆ. ಡಿ.13ರಂದು ದತ್ತಾತ್ರೇಯ ಜಯಂತಿ ಹಾಗೂ ದತ್ತಪಾದುಕೆ ದರ್ಶನದೊಂದಿಗೆ ಅಭಿಯಾನ ಮುಕ್ತಾಯಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಭಾಗ ಸಹಸಂಯೋಜಕ ಸುನಿಲ್ ಕೆ.ಆರ್., ಬಜರಂಗ ದಳ ಉಡುಪಿ ಜಿಲ್ಲಾ ಸಂಯೋಜಕ ದಿನೇಶ್ ಮೆಂಡನ್, ಅನಿಲ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News