ವಿಟ್ಲ ಪಟ್ಟಣ ಪಂಚಾಯತ್ ಗೆ ಅನುದಾನ : ಸಚಿವ ರೈ

Update: 2016-12-03 14:11 GMT

ಬಂಟ್ವಾಳ, ಡಿ. 3:   ನಗರೋತ್ಥಾನ ಯೋಜನೆಯಡಿ ಹೊಸದಾಗಿ ನಿರ್ಮಾಣವಾದ ಪಟ್ಟಣ ಪಂಚಾಯತ್ ಹಾಗೂ ಹಳೆ ನಗರ ಪಂಚಾಯತ್‌ಗಳಿಗೆ ಹಣ ವಿಂಗಡನೆಯಾಗಿ ಮಂಜೂರಾತಿಯಾಗಿದ್ದು , ಹೊಸದಾಗಿ ಘೋಷಣೆಯಾದ ನಗರ ಪಂಚಾಯತ್‌ಗಳಿಗೆ ತಲಾ 5 ಕೋಟಿ ರೂ. ಬಿಡುಗಡೆಯಾಗಿದೆ. ವಿಟ್ಲ ಪಟ್ಟಣ ಪಂಚಾಯತ್ ಕೂಡಾ ಇದರಲ್ಲಿ ಸೇರಿದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು. 

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಿಟ್ಲ ಪ್ರೆಸ್‌ಕ್ಲಬ್ ಉದ್ಘಾಟನೆಯಾದ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿದ ಸಚಿವರು ಬೆಳೆಯುವ ನಗರಗಳಲ್ಲಿ ವಾಹನ ಸಂಚಾರ ಸುಗಮವಾಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ರಸ್ತೆ ನಿರ್ಮಾಣ ಕಾರ್ಯಗಳು ನಡೆದಿದೆ. ಪೊಳಲಿ ಜಂಕ್ಷನ್‌ನಿಂದ ಕಬಕ ಜಂಕ್ಷನ್‌ವರೆಗೆ 18 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದರು.

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಗಳೆಲ್ಲವನ್ನೂ ಪ್ರಗತಿ ಪಡಿಸುವ ಕಾರ್ಯ ಸುಸೂತ್ರವಾಗಿ ನಡೆಯುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅಳಿಕೆ ಗ್ರಾಮಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದ ಸಚಿವರು, ವಿಟ್ಲ ಪೇಟೆಯ ಅಭಿವೃದ್ಧಿಗೆ ಸಮಸ್ಯೆಯಾದ ಮೆಸ್ಕಾಂ ಕಂಬಗಳ ತೆರುವು ಕಾರ್ಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿಚಾರಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಕಲ್ಲಡ್ಕ - ಸಾರಡ್ಕ ಅಂತರಾಜ್ಯ ಹೆದ್ದಾರಿಯ ದುರಸ್ಥಿಕಾರ್ಯವನ್ನು ಮಾಡಲಾಗಿದೆ. ಮುಂದಿನ ದಿನದಲ್ಲಿ ಅಗಲೀಕರಣ ಗೊಳಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಅಂತರ್ಜಲ ಮಟ್ಟ ಕುಸಿತದ ನಿಟ್ಟಿನಲ್ಲಿ ಕೊಳವೆಬಾವಿ ಕೊರೆಯುವುದನ್ನು ಕಂದಾಯ ಇಲಾಖೆ ನಿಷೇಧಿಸಿದೆ. ಖಾಸಗಿಯವರಿಗೆ ಮಾತ್ರ ಇದು ತೊಂದರೆಯಾಗಲಿದ್ದು, ಸರಕಾರದ ಯೋಜನೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಂತರ್ಜಲದ ವಿಚಾರದಲ್ಲಿ ಕಿಂಡಿ ಅಣಕಟ್ಟು ಸೇರಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿದೆ ಎಂದರು.

ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ವಿಟ್ಲ ಪಟ್ಟಣ ಪಂಚಾಯತ್‌ಗೆ ಅನುದಾನಗಳು ಬಿಡುಗಡೆಯಾಗುತ್ತಿದ್ದು, ನಗರೋಸ್ಥಾನದ ಅನುದಾನ ಹಂಚಿಕೆ ಜವಾಬ್ದಾರಿ ಶಾಸಕರಿಗಿದೆ. ಇದರಲ್ಲಿ ಕಟ್ಟಣ, ರಸ್ತೆ, ಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಅವಕಾಶಗಳಿದೆ. ಹೊಸ ಕಟ್ಟಣ ನಿರ್ಮಾಣವಾಗುವುದಿದ್ದರೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಶಾಶ್ವತ ಕೊಠಡಿ ಕಲ್ಪಿಸಲು ಪ್ರಯತ್ನಿಸಲಾಗುವುದು. ಅತ್ಯಧಿಕ ಅಭಿವೃದ್ಧಿ ಕಾರ್ಯಗಳು ಈ ಆಡಳಿತಾವಧಿಯಲ್ಲಿ ನಡೆದಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣಚಂದ್ರ ಆಳ್ವ, ಕರ್ನಾಟಕ ರಾಜ್ಯ ಇಂಟಕ್ ಬಂಟ್ವಾಳ ತಾಲೂಕು ಆಧ್ಯಕ್ಷ ರಮಾನಾಥ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News