×
Ad

ತಡವಾಗಿ ಬಂದ ಪ್ರಯಾಣಿಕರಿಗಾಗಿ ಎರಡು ಗಂಟೆ ವಿಮಾನಯಾನ ವಿಳಂಬ

Update: 2016-12-03 19:46 IST

ಮುಂಬೈ, ಡಿ.3: ತಡವಾಗಿ ಆಗಮಿಸಿದ ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನಯಾನವನ್ನು ಎರಡು ಗಂಟೆ ವಿಳಂಬಗೊಳಿಸಿದ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಭೋಪಾಲಕ್ಕೆ ತೆರಳಬೇಕಿದ್ದ ಜೆಟ್ ಏರ್‌ವೇಸ್ ವಿಮಾನ ಮುಂಬೈ ವಿಮಾನ ನಿಲ್ದಾಣದಿಂದ ಮುಂಜಾನೆ 5.55ಕ್ಕೆ ಪ್ರಯಾಣ ಆರಂಭಿಸಬೇಕಿತ್ತು. ಇನ್ನೇನು ಒಂದು ನಿಮಿಷದಲ್ಲಿ ವಿಮಾನ ಆಗಸಕ್ಕೆ ನೆಗೆಯುತ್ತದೆ ಎಂಬ ಸಂದರ್ಭದಲ್ಲಿ ತಡವಾಗಿ ಆಗಮಿಸುತ್ತಿರುವ ಕೆಲವು ಪ್ರಯಾಣಿಕರಿಗಾಗಿ ವಿಮಾನಯಾನ ಸ್ವಲ್ಪ ಹೊತ್ತು ವಿಳಂಬಗೊಳ್ಳುತ್ತದೆ ಎಂದು ಪ್ರಯಾಣಿಕರಿಗೆ ತಿಳಿಸಲಾಯಿತು. ಮದುವೆ ಸಮಾರಂಭಕ್ಕೆ ಹೋಗುತ್ತಿದ್ದ ತಂಡವೊಂದರ ಕೆಲ ಪ್ರಯಾಣಿಕರು ಅದಾಗಲೇ ವಿಮಾನದಲ್ಲಿದ್ದರೆ ಕೆಲವರು ವಿಳಂಬವಾಗಿ ಆಗಮಿಸಿದ್ದರು.

 ವಿಳಂಬವಾಗಿ ಆಗಮಿಸಿದ 17 ಪ್ರಯಾಣಿಕರಿಗೆ ವಿಮಾನದ ಸಿಬ್ಬಂದಿಗಳು ಪ್ರವೇಶ ನಿರಾಕರಿಸಿದ್ದರು. ಈ ವೇಳೆ ವಿಮಾನದಲ್ಲಿದ್ದ ಇವರ ಮಿತ್ರರು ತಕರಾರು ಎಬ್ಬಿಸಿದರು. 17 ಪ್ರಯಾಣಿಕರು ಬಂದರೆ ಮಾತ್ರ ತಾವು ಪ್ರಯಾಣಿಸುತ್ತೇವೆ ಎಂದು ತಗಾದೆ ತೆಗೆದರು.ಅಲ್ಲದೆ ವಿಮಾನದ ಬಾಗಿಲಲ್ಲಿ ಅಡ್ಡನಿಂತು ಬಾಗಿಲು ಮುಚ್ಚದಂತೆ ತಡೆದರು. ಈ ವೇಳೆಗಾಗಲೇ ವಿಮಾನದ ಸೀಟುಗಳು ಭರ್ತಿಯಾಗಿದ್ದವು. ನಿರ್ವಾಹವಿಲ್ಲದೆ ವಿಮಾನದ ಸಿಬ್ಬಂದಿಗಳು, ಈ ಹದಿನೇಳು ಪ್ರಯಾಣಿಕರಿಗಾಗಿ ವಿಮಾನದಲ್ಲಿರುವ ಪ್ರಯಾಣಿಕರು ಸೀಟು ಬಿಟ್ಟುಕೊಡುವಂತೆ ಅನೌನ್ಸ್ ಮಾಡಿದರು.

 ಸ್ವಯಂಪ್ರೇರಿತರಾಗಿ ಸೀಟು ಬಿಟ್ಟುಕೊಟ್ಟು ಸಂಜೆ ವೇಳೆ ಹೊರಡಲಿರುವ ಮತ್ತೊಂದು ವಿಮಾನದಲ್ಲಿ ಪ್ರಯಾಣಿಸಲು ಸಿದ್ದರಿರುವ ಪ್ರಯಾಣಿಕರಿಗೆ 10 ಸಾವಿರ ರೂ. ಪುರಸ್ಕಾರ ಕೊಡುವುದಾಗಿ ಸಿಬ್ಬಂದಿಗಳು ಘೋಷಿಸಿದರು. ಇದಕ್ಕೆ ಸ್ಪಂದಿಸಿದ ಐವರು ಪ್ರಯಾಣಿಕರು ಸೀಟು ಬಿಟ್ಟುಕೊಟ್ಟರು. ಆದರೂ ಉಳಿದ 12 ಪ್ರಯಾಣಿಕರಿಗೆ ಸ್ಥಳಾವಕಾಶ ಒದಗಿಸಲು ಮತ್ತಷ್ಟು ಕಾಯುವ ನಿರ್ಧಾರಕ್ಕೆ ಬರಲಾಯಿತು. ಕೆಲ ಪ್ರಯಾಣಿಕರು ಪೊಲೀಸರಿಗೆ ದೂರು ನೀಡುವಂತೆ ಕೋರಿದಾಗ ವಿಮಾನದ ಸಿಬ್ಬಂದಿಗಳು ನಿರಾಕರಿಸಿದರು.

  ಬೆಳಿಗ್ಗೆ 7.45ರವರೆಗೆ ಕಾಯಲಾಯಿತು. ಈ ವೇಳೆ ತಾಳ್ಮೆ ಕಳೆದುಕೊಂಡ ಪ್ರಯಾಣಿಕರು ಗದ್ದಲ ಆರಂಭಿಸಿದಾಗ ಅಂತೂ ಬೆಳಿಗ್ಗೆ 8 ಗಂಟೆ ವೇಳೆಗೆ ವಿಮಾನ ‘ಟೇಕ್‌ಆಫ್’ ಆಯಿತು. ಈ ಪ್ರಕರಣದ ವಿಡಿಯೋ ದೃಶ್ಯಾವಳಿಯನ್ನು ಕೆಲ ಪ್ರಯಾಣಿಕರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ. ತಡವಾಗಿ ಬಂದ ಪ್ರಯಾಣಿಕರಿಗಾಗಿ ವಿಮಾನ ಯಾನವನ್ನೇ ಬರ್ಬೋಬರಿ ಎರಡು ಗಂಟೆ ಮುಂದೂಡಿದ ಘಟನೆ ಬಹುಷಃ ಇದೇ ಮೊದಲ ಬಾರಿ ನಡೆದಿದೆ ಎಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮುಂಬೈಯ ಅದಿತಿ ಶ್ರೀವಾಸ್ತವ ತಿಳಿಸಿದ್ದಾರೆ.

ಇನ್ನೋರ್ವ ಪ್ರಯಾಣಿಕ ಪರೀಕ್ಷಿತ್ ರೆಡ್ಡಿ ಎಂಬವರು ಮರಣ ಹೊಂದಿದ ತನ್ನ ತಂದೆಯ ಪಾರ್ಥಿವ ಶರೀರದ ಅಂತಿಮ ದರುಶನಕ್ಕೆಂದು ಹೊರಟಿದ್ದರು. ವಿಮಾನಯಾನ ವಿಳಂಬದಿಂದ ಅನಿವಾರ್ಯವಾಗಿ ಇವರ ಜೊತೆ, ಇವರ ಕುಟುಂಬದವರೂ ಸಂಕಷ್ಟ ಪಡುವಂತಾಯಿತು.

 ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿರುವ ಘಟನೆಗೆ ತಾಂತ್ರಿಕ ತೊಂದರೆಯೇ ಕಾರಣ ಎಂದು ಜೆಟ್ ಏರ್‌ವೇಸ್‌ನ ವಕ್ತಾರರು ತಿಳಿಸಿದ್ದಾರೆ.ಅಲ್ಲದೆ ತಡವಾಗಿ ಬಂದ ಕೆಲ ಪ್ರಯಾಣಿಕರು ನಂತರದ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ನೀಡಿದರೂ ಅದನ್ನು ನಿರಾಕರಿಸಿ ವಿಮಾನಯಾನಕ್ಕೆ ತಡೆ ಒಡ್ಡಿದರು. ಇದರಿಂದ ವಿಮಾನಯಾನ ವಿಳಂಬವಾಯಿತು ಹಾಗೂ ಪ್ರಯಾಣಿಕರಿಗೆ ತೊಂದರೆಯಾಯಿತು . ವಿಮಾನಯಾನ ನಿರಾಕರಿಸಲ್ಪಟ್ಟ ಪ್ರಯಾಣಿಕರಿಗೆ ನಿಯಮದಂತೆ ಪರಿಹಾರ ನೀಡಲಾಗುವುದು ಮತ್ತು ಟಿಕೆಟ್ ಬುಕ್ಕಿಂಗ್ ಸಂದರ್ಭ ಉಂಟಾದ ತಾಂತ್ರಿಕ ತೊಂದರೆ ನಿವಾರಿಸಲಾಗುವುದು ಎಂದು ಜೆಟ್ ಏರ್‌ವೇಸ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ನಿಯಮದಂತೆ, ವಿಮಾನ ಟೇಕ್‌ಆಫ್ ಆಗುವ 45 ನಿಮಿಷ ಮೊದಲು ಚೆಕ್ ಇನ್ ಕೌಂಟರ್‌ಗಳನ್ನು ಮುಚ್ಚಬೇಕು. ಈ ಕಾಲಮಿತಿ ಮೀರಿ ಬಂದ ಪ್ರಯಾಣಿಕರಿಗೆ ವಿಮಾನ ಏರಲು ಅವಕಾಶವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News