ಯಕ್ಷಗಾನ ಕಲಿಕೆಯಿಂದ ಮಕ್ಕಳ ಸಮಗ್ರ ಬೆಳವಣಿಗೆ ಸಾಧ್ಯ

Update: 2016-12-03 14:33 GMT

 ಉಡುಪಿ, ಡಿ.3: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ವಿದ್ಯಾಭ್ಯಾಸದೊಂದಿಗೆ ಕಲೆ ಹಾಗೂ ಕ್ರೀಡೆಯೂ ಬೇಕಾಗುತ್ತದೆ. ಯಕ್ಷಗಾನ ಕಲಿಕೆಯಲ್ಲಿ ಈ ಮೂರು ಸಹ ದೊರೆಯುವುದರಿಂದ ಮಕ್ಕಳ ಪ್ರತಿಭೆ ವಿಕಸಿತಗೊಳ್ಳಲು ಸಾದ್ಯವಾಗುತ್ತದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.

ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್, ಪರ್ಯಾಯ ಪೇಜಾವರ ಮಠ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಕ್ಷಗಾನ ಕಲಾರಂಗ ಗಳ ಸಹಯೋಗದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿರುವ 10ನೇ ವರ್ಷದ ಕಿಶೋರ ಯಕ್ಷ ಸಂಭ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಮಕ್ಕಳ ಪ್ರತಿಭೆ ಬೆಳೆಯಲು ಯಕ್ಷಶಿಕ್ಷಣ ಸೂಕ್ತವಾದ ಮಾಧ್ಯಮವಾಗಿದೆ. ಇದರಲ್ಲಿ ಜ್ಞಾನಾಭಿವೃದ್ಧಿಯೊಂದಿಗೆ ಕಲೆ ಹಾಗೂ ವಾಕ್ ಪ್ರತಿಭೆ ಬೆಳೆಯಲು ಸಾಧ್ಯ. ಇಲ್ಲಿ ಮಕ್ಕಳು ಕುಣಿಯುವುದು ಕೃಷ್ಣನೇ ಕುಣಿದಂತೆ ಭಾಸವಾಗುತ್ತದೆ ಎಂದು ಪೇಜಾವರಶ್ರೀಗಳು ನುಡಿದರು.

ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಯಕ್ಷ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಮಾತನಾಡಿ, ಯಕ್ಷ ಶಿಕ್ಷಣದಲ್ಲಿ ಭಾಗವಹಿಸುವ ವಿದ್ಯಾರ್ಥಿ ಶಿಕ್ಷಣದಲ್ಲೂ ಉತ್ತಮ ಸಾಧನೆ ತೋರಿರುವುದು ಇಷ್ಟು ವರ್ಷಗಳ ಕಲಿಕೆಯಿಂದ ಸಾಬೀತಾಗಿದೆ ಎಂದರು.

ವೇದಿಕೆಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷರಾದ, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ ಉಪಸ್ಥಿತರಿದ್ದರು.

ಯಕ್ಷಶಿಕ್ಷಣ ಟ್ರಸ್ಟ್‌ನ ಸ್ಥಾಪಕರಾದ ಮಾಜಿ ಶಾಸಕ ಕೆ.ರಘುಪತಿ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರೆ, ಪ್ರೊ.ನಾರಾಯಣ ಎಂ.ಹೆಗ್ಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News