×
Ad

ನೋವುಗಳಿಗೆ ಸ್ಪಂದಿಸಿ,ಗುಣ ಪಡಿಸುವ ಗುಣ ಸಾಹಿತ್ಯಕ್ಕಿದೆ : ಜಯಂತ್ ಕಾಯ್ಕಿಣಿ

Update: 2016-12-03 22:46 IST

ಮಂಗಳೂರು, ಡಿ. 3: ಮಾನವನ ನೋವುಗಳಿಗೆ ಸ್ಪಂದಿಸಿ ಅವುಗಳನ್ನು ಗುಣ ಪಡಿಸುವುದೇ ಸಾಹಿತ್ಯ ಮತ್ತು ವೈದ್ಯಕೀಯ ಕ್ಷೇತ್ರದ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಸಾಹಿತ್ಯವು ಎಂದಿಗೂ ಗುರಿ ತಪ್ಪಿ ಹೋಗಬಾರದು ಎಂದು ಖ್ಯಾತ ಕನ್ನಡ ಕವಿ ಹಾಗೂ ಲೇಖಕ ಡಾ.ಜಯಂತ್ ಕಾಯ್ಕಿಣಿ ಹೇಳಿದ್ದಾರೆ.

  ಅವರು  ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆದ ಆಚಾರ್ಯ ಧರ್ಮಾನಂದ ಕೋಸಂಬಿ ವಿಶ್ವ ಕೊಂಕಣಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದರು.

ಪ್ರತಿಯೊಂದು ಧರ್ಮದಲ್ಲಿ ಕೂಡಾ ಆಧ್ಯಾತ್ಮವನ್ನು ಅರಿಯಲು ಇರುವ ದಾರ್ಶನಿಕತೆಯ ಕಿಂಡಿ ಇರುತ್ತದೆ. ಆದರೆ ಧಾರ್ಮಿಕ ವಕ್ತಾರರು ಎನಿಸಿಕೊಂಡವರು ಈ ಕಿಂಡಿಯನ್ನು ಮುಚ್ಚಿದ್ದು, ಅದನ್ನು ಅರಿಯಲು ಸಾಹಿತ್ಯದ ಮೊರೆ ಹೋಗ ಬೇಕಾಗಿದೆ. ಸಾಹಿತ್ಯವು ತನ್ನ ನೈಜ ಕೆಲಸವನ್ನು ಮಾಡುತ್ತಿದೆ ಎಂದವರು ಅಭಿಪ್ರಾಯಪಟ್ಟರು.

ಇಂದಿನ ಯುವಜನರು ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ. ಅವುಗಳಲ್ಲಿ ಬರುವುದೆಲ್ಲಾ ಸತ್ಯ ಎಂದು ನಂಬಿ ದಾರಿ ತಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಹಿತ್ಯವು ಯುವಜನರ ಸಮಸ್ಯೆಗಳಿಗೆ ಸ್ಪಂದಿಸುವ  ಕೆಲಸ ಮಾಡಬೇಕಾಗಿದೆ ಎಂದರು.

 ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಡಾ.ಕೆ. ಭೈರಪ್ಪ ಅವರು ಕೊಂಕಣಿ ಮೂಲದ ಪಾಲಿ ಮತ್ತು ಬೌದ್ಧ ವಿದ್ವಾಂಸ ಆಚಾರ್ಯ ಧರ್ಮಾನಂದ ಕೋಸಂಬಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಾಹಿತ್ಯ ಉತ್ಸವವನ್ನು ಉದ್ಘಾಟಿಸಿದರು.

ಕೊಂಕಣಿಯ ನಾಲ್ಕು ಪುಸ್ತಕಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಲೇಖಕಿ ಹಾಗೂ ಅನುವಾದಕಿ ಡಾ.ಗೀತಾ ಶೆಣೈ ಅವರು ಆಚಾರ್ಯ ಕೋಸಂಬಿ ಅವರನ್ನು ಪರಿಚಯಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಕುಮಾರ್, ಗೋವಾ ವಿಶ್ವ ವಿದ್ಯಾನಿಲಯದ ಭಾಷಾ ಶಾಸತ್ರಿ ಮತ್ತು ಸಂಸ್ಕೃತಿ ವಿಭಾಗದ ಮಾಜಿ ಮುಖ್ಯಸ್ಥ ಡಾ. ಕಿರಣ್ ಬುಡ್ಕುಲೆ ೀ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News