×
Ad

ಬಾಬರಿ ಮಸೀದಿ ವಿವಾದ: ನ್ಯಾಯಾಲಯದ ಹೊರಗೆ ಇತ್ಯರ್ಥಕ್ಕೆ ಖಂಡನೆ

Update: 2016-12-03 22:51 IST

  ಮಂಗಳೂರು, ಡಿ. 3: ಬಾಬರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸುವ ಯಾವುದೇ ಸಾಧ್ಯತೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ಇಂದು ತಳ್ಳಿಹಾಕಿತು.

 ನವ ದೆಹಲಿಯಲ್ಲಿರುವ ಪ್ರಧಾನ ಕಾರ್ಯಾಲಯದಲ್ಲಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಾತೆ ಇಸ್ಲಾಮಿ ಹಿಂದ್‌ನ ರಾಷ್ಟ್ರಾಧ್ಯಕ್ಷ ಮೌಲಾನಾ ಸಯ್ಯದ್ ಜಲಾಲುದ್ದೀನ್ ಉಮರಿ, ಬಾಬರಿ ಮಸೀದಿಯ ಧ್ವಂಸದ 24ನೆಯ ವರ್ಷದ ನಂತರವೂ ನಾವು ಈ ಸಮಸ್ಯೆಯ ಪರಿಹಾರ ಮತ್ತು ಮಸೀದಿಯ ಪುನರ್ನಿರ್ಮಾಣಕ್ಕಾಗಿ ಶಾಂತಿಯುತವಾದ ಸಂಘರ್ಷವನ್ನು ಮುಂದುವರಿಸಿದ್ದೇವೆ ಎಂದರು.

       ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್, ಮಾನವ ಹಕ್ಕು ಸಂಘಟನೆಗಳು ಮತ್ತು ಎಲ್ಲಾ ನ್ಯಾಯಪ್ರೀಯ ಪ್ರಜೆಗಳ ಸಹಕಾರದೊಂದಿಗೆ ಈ ಹೋರಾಟವು ಮುಂದುವರಿದಿದೆ. ಬಾಬರಿ ಮಸೀದಿ ಮೊಕದ್ದಮೆಯನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸುವ ಸಾಧ್ಯತೆಯನ್ನು ಜಮಾತ್ ತಳ್ಳಿಹಾಕುತ್ತದೆ.

ಡಿಸೆಂಬರ್ 6, 1992 ಭಾರತದ ಇತಿಹಾಸದ ಒಂದು ಕರಾಳ ದಿನವಾಗಿದೆ. ಮಸೀದಿಯ ಧ್ವಂಸಕ್ಕೆ ಕಾರಣರಾದ ದುಷ್ಕರ್ಮಿಗಳು ಇಂದಿಗೂ ಸ್ವಂತಂತ್ರರಾಗಿರುವುದು ಬಹಳ ವಿಷಾದಕರವಾಗಿದೆ. ಅದರ ನಂತರ ಬಂದ ಯಾವುದೇ ಸರಕಾರವು ಅವರನ್ನು ಬಂಧಿಸುವ ಪ್ರಯತ್ನವನ್ನೂ ಮಾಡಲಿಲ್ಲ.

ಜೂನ್ 2009ರಲ್ಲಿ ಸುಧೀರ್ಘವಾದ 17 ವರ್ಷಗಳ ನಂತರ ಲಿಬೆರ್ಹಾನ್ ಕಮಿಷನ್ ತನ್ನ ವರದಿಯನ್ನು ಪ್ರಸ್ತುತಪಡಿಸಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಲಿಲ್ಲ. ಮೊಕದ್ದಮೆಯು ಈಗ ಉಚ್ಚ ನ್ಯಾಯಾಲಯದ ಮುಂದಿದ್ದು ತೀರ್ಪು ಮಸೀದಿಯ ಪರವಾಗಿರಬಹುದು ಎಂದು ಜಮಾತ್ ನಿರೀಕ್ಷಿಸುತ್ತಿದೆ ಎಂದರು.

ಜಮಾತೆ ಇಸ್ಲಾಮಿ ಹಿಂದ್ ನ ಪ್ರಧಾನ ಕಾರ್ಯದರ್ಶಿಯಾದ ಮುಹಮ್ಮದ್ ಸಲೀಂ ಎಂಜಿನಿಯರ್ ಮಾತನಾಡಿ, ಕಪ್ಪು ಹಣವನ್ನು ನಿಯಂತ್ರಿಸುವ ಸಲುವಾಗಿ ನೋಟು ರದ್ದತಿಯ ಕ್ರಮವನ್ನು ಕೈಕೊಂಡಿದ್ದೇವೆ ಎಂಬ ಸರಕಾರದ ವಾದದ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಾ, ನೋಟು ರದ್ಧತಿಯು ಕಪ್ಪು ಹಣವನ್ನು ನಿಯಂತ್ರಿಸುತ್ತದೆ ಎಂಬ ಸರಕಾರದ ವಾದದ ಬಗ್ಗೆ ನಮಗೆ ಸಂತೃಪ್ತಿಯಿಲ್ಲ.

ಕಪ್ಪು ಹಣವನ್ನು ತಡೆಹಿಡಿಯುವುದಾದರೆ ಎರಡು ಸಾವಿರದ ನೋಟನ್ನು ಯಾಕೆ ಜಾರಿಗೊಳಿಸಬೇಕಿತ್ತು? ಹಠಾತ್ತಾಗಿ ಬಂದ ರದ್ದತಿಯ ಘೋಷಣೆಯು ಒಂದು ಚುನಾವಣಾ ತಂತ್ರವಾಗಿದ್ದು ಅದರಿಂದಾಗಿ ಲಕ್ಷಾಂತರ ಜನಸಾಮಾನ್ಯರಿಗೆ ಅನಾನುಕೂಲವಾಗಿದೆ. ಜನರಿಗೆ ತಮ್ಮದೇ ಹಣವನ್ನು ಪಡೆಯಲು ಬಹಳ ಗಂಟೆಗಳ ಕಾಲ ಅನೇಕ ದಿನಗಳನ್ನು ಬ್ಯಾಂಕ್ ಕ್ಯೂಗಳಲ್ಲಿ ಕಳೆಯಬೇಕಾದ ಶೋಚನೀಯ ಪರಿಸ್ಥಿತಿ ಬಂದಿದೆ.ಸರಕಾರವು ನೋಟು ರದ್ದತಿಯ ಯೋಜನೆಯ ಬಗ್ಗೆ ವಿವರಿಸುವ ‘ಶ್ವೇತಪತ್ರ’ವನ್ನು ಶೀಘ್ರವೇ ಹೊರಡಿಸಿ ಪ್ರಜೆಗಳು ಎದುರಿಸುತ್ತಿರುವ ಅಸೌಕರ್ಯವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. 

ರೋಹಿಂಗ್ಯದ ಮುಸ್ಲಿಮರ ಮೇಲೆ ನಡೆಯುತ್ತಿರುವ ನರಮೇಧ, ಅವರ ಜೀವ ಮತ್ತು ಸೊತ್ತು ಹಾನಿಯ ಬಗ್ಗೆ ಮಯನ್ಮಾರ್ ಸರಕಾರವನ್ನು ಖಂಡಿಸುತ್ತಾ ,ಆಂಗ್ ಸಾನ್ ಸು ಕಿಯ ನೇತೃತ್ವದಲ್ಲಿ ಪ್ರಜಾಸತ್ತಾತ್ಮಕ ಸರಕಾರದ ಸ್ಥಾಪನೆಯ ಹೊರತಾಗಿಯೂ ರೋಹಿಂಗ್ಯಾದ ಮುಸ್ಲಿಮರ ಜನಾಂಗೀಯ ಶುದ್ಧೀಕರಣ ನಡೆಯುತ್ತಲಿದೆ. ರೋಹಿಂಗ್ಯಾ ಮುಸ್ಲಿಮರ ದುರ್ದೆಸೆಯ ಬಗ್ಗೆ ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಮತ್ತು ಮುಸ್ಲಿಮ್ ರಾಷ್ಟ್ರಗಳು ತೋರಿಸುತ್ತಿರುವ ನಿರ್ಲಕ್ಷದ ಬಗ್ಗೆ ಜಮಾತ್ ದುಃಖ ವ್ಯಕ್ತಪಡಿಸುತ್ತದೆ.

ಮಯನ್ಮಾರ್ ಸರಕಾರವು ತಕ್ಷಣವೇ ರೋಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಿ, ಅವರಿಗೆ ಶಾಂತಿಯುತವಾದ ವಾತಾವರಣ ಒದಗಿಸಿಕೊಟ್ಟು ಅವರ ಸ್ವಾತಂತ್ರವನ್ನು ರಕ್ಷಿಸುವ ವ್ಯವಸ್ಥೆ ಮಾಡಬೇಕು ಮತ್ತು ಅವರನ್ನು ದಮನಿಸುತ್ತಿರುವ ಸೈನ್ಯ ಮತ್ತು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ ಅಗ್ರಹಿಸುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News