ವಿಶ್ವ ಕೊಂಕಣಿ ಭಾಷೆ, ಸಾಹಿತ್ಯ ಫೌಂಡೇಶನ್ ಪುರಸ್ಕಾರ

Update: 2016-12-03 17:51 GMT

ಮಂಗಳೂರು, ಡಿ.3: ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಸಾಧಕರಿಗೆ ವಿಶ್ವ ಕೊಂಕಣಿ ಕೇಂದ್ರದ ಕೊಂಕಣಿ ಭಾಷೆ ಹಾಗೂ ಸಾಹಿತ್ಯ ಫೌಂಡೇಶನ್ ವತಿಯಿಂದ ಶನಿವಾರ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಸುಧಾ ಕರಂಗಟೆ ಅವರಿಗೆ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪ್ರಶಸ್ತಿ, ಮೆಲ್ವಿನ್ ರೊಡ್ರಿಗಸ್‌ರಿಗೆ ವಿಮಲಾ ವಿ.ಪೈ ಕವಿತಾ ಕೃತಿ ಪ್ರಶಸ್ತಿ, ಅರವಿಂದ ಬಟಿಕಾರ್‌ರಿಗೆ ವಿಮಲಾ ವಿ.ಪೈ ವಿಶ್ವ ಕೊಂಕಣಿ ಜೀವನ ಸಿದ್ದಿ ಸನ್ಮಾನ, ಡಾ.ಒಲಿಂಡಾ ಪಿರೇರರಿಗೆ ಹಾಗೂ ಭಾಸ್ಕರ ಕೊಗ್ಗ ಕಾಮತ್‌ರಿಗೆ ‘ಬಸ್ತಿ ವಾಮನ ಶೆಣೈ ಸೇವಾ ಪ್ರಶಸ್ತಿ’ ಪತ್ರದೊಂದಿಗೆ ಒಂದು ಲಕ್ಷ ರೂ.ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

   ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣ ಶೆಟ್ಟಿ ಹಾಗೂ ವಿಶ್ವ ಕೊಂಕಣಿ ಭಾಷಾ ಹಾಗೂ ಸಾಹಿತ್ಯ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಬಸ್ತಿ ವಾಮನ ಶೆಣೈ ನೇತೃತ್ವದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಣಿಪಾಲ ಗ್ಲೋಬಲ್ ಎಜುಕೇಶನ್‌ನ ಅಧ್ಯಕ್ಷ ಟಿ.ವಿ.ಮೋಹನ್ ದಾಸ್ ಪೈ ಮಾತನಾಡಿ, ಕೊಂಕಣಿಗರು ಶೈಕ್ಷಣಿಕ ಹಾಗೂ ಕಲೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಂಘಟಿತ ಪ್ರಯತ್ನ ನಡೆಯಬೇಕು. ದೇಶದ ಒಂದು ಸಣ್ಣ ಸಮುದಾಯದ ಅಭಿವೃದ್ಧಿಗೆ ರಾಜಕೀಯವಾಗಿಯೂ ಶಕ್ತಿಯುತವಾಗಬೇಕು ಎಂದರು.

ವಿಶ್ವ ಕೊಂಕಣಿ ಭಾಷಾ ಹಾಗೂ ಸಾಂಸ್ಕೃತಿಕ ಫೌಂಡೇಶನ್‌ನ ಖಜಾಂಚಿ ಬಿ.ಆರ್.ಭಟ್, ಉಪಾಧ್ಯಕ್ಷ ವೆಂಕಟೇಶ್ ಎನ್. ಬಾಳಿಗಾ, ಕಾರ್ಯದರ್ಶಿ ಪ್ರಭಾಕರ ಪ್ರಭು, ವಿಕೆಎಸ್‌ಎಸ್ ಎಫ್ ಕಾರ್ಯದರ್ಶಿ ಪ್ರದೀಪ್ ಜಿ ಪೈ, ಕೊಂಕಣಿ ಭಾಷಾ ಮಂಡಲದ ಪ್ರತಿನಿಧಿ ಗೀತಾ ಸಿ ಕಿಣಿ, ಕುಡುಬಿ ಸಮುದಾಯ ಸಂಘಟನೆಯ ಪ್ರತಿನಿಧಿ ನಾರಾಯಣ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News