×
Ad

ಮೀಸಲಾತಿಗಾಗಿ ಮುಸ್ಲಿಮರ ಬೃಹತ್ ಮೆರವಣಿಗೆ

Update: 2016-12-04 16:40 IST

ರಂಗಾಬಾದ್, ಡಿಸೆಂಬರ್ 4: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಸಿಲ್ಲೋಡ್ ನಗರದಲ್ಲಿ ಲಕ್ಷಾಂತರ ಮುಸ್ಲಿಮರು ’ಮುಸ್ಲಿಮ್ ಅರಕ್ಷಣ್ ಮಹಾ ಮೂಕ್ ಮೋರ್ಚಾ’ ನೇತೃತ್ವದಲ್ಲಿ ಮೀಸಲಾತಿ ಬೇಡಿಕೆಯೊಂದಿಗೆ ಬೀದಿಗಿಳಿದು ಮೆರವಣಿಗೆ ನಡೆಸಿದ್ದಾರೆಂದು ವರದಿಯಾಗಿದೆ. ಈ ಸಮುದಾಯದ ಜನರು ರಂಗನಾಥಮಿಶ್ರ ಆಯೋಗ, ಜಸ್ಟಿಸ್ ಸಾಚಾರ್ ಸಮಿತಿ, ಸ್ವಾಮಿನಾಥನ್ ಸಮಿತಿ ಮತ್ತು ಮಹಮೂದುರ್ರ್‌ ರಹ್ಮಾನ್ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಿ ಮುಸ್ಲಿಮರಿಗೆ ಶೇ.15ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ದಾರೆ.

ಜುಮಾ ಮಸೀದಿಯಿಂದ ಮೌನಮೆರವಣಿಗೆ ಆರಂಭವಾಗಿತ್ತು. ರ್ಯಾಲಿಯಲ್ಲಿ ರಾಜಕಾರಣಿಗಳು, ವೈದ್ಯರು, ವಕೀಲರು, ಶಿಕ್ಷಕರು, ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಮಕ್ಕಳು ಕೂಡಾ ಪಾಲ್ಗೊಂಡಿದ್ದರು. ನಿನ್ನೆ ಮಧ್ಯಾಹ್ನ 2:30ಕ್ಕೆ ಆರಂಭವಾದ ರ್ಯಾಲಿ ನಗರದ ವಿವಿಧ ರಸ್ತೆಗಳಲ್ಲಿ ಹಾದು ಸಂಜೆ 4:30ರ ವೇಳೆಗೆ ತಹಶೀಲ್ದಾರ್ ಕಚೇರಿ ಮುಂದೆ ಜಮಾವಣೆಗೊಂಡು ಸಮಾಪ್ತಗೊಂಡಿತ್ತು.

ತಹಶೀಲ್ದಾರ್ ಕಚೇರಿಯಲ್ಲಿ ರ್ಯಾಲಿ ಕೊನೆಗೊಂಡ ಬಳಿಕ ಪ್ರತಿನಿಧಿಗಳು ತಹಶೀಲ್ದಾರ್‌ರಿಗೆ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿದ್ದಾರೆ. ಇದರಲ್ಲಿ ಶಿಕ್ಷಣ, ಉದ್ಯೋಗದಲ್ಲಿ ಮುಸ್ಲಿಮರಿಗೆ ಮೀಸಲಾತಿ ಸಹಿತ ವಿಭಿನ್ನ ಸಮಿತಿಗಳ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ. ಮಾತ್ರವಲ್ಲ ಮುಸ್ಲಿಮರ ಬಂಧನ ಸತ್ರವನ್ನು ನಿಲ್ಲಿಸಬೇಕು. ಮುಸ್ಲಿಂ ಪರ್ಸನಲ್ ಲಾದಲ್ಲಿ ಹಸ್ತಕ್ಷೇಪ ನಡೆಸಬಾರದೆಂದುಕೂಡಾ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News