ನೋಟು ಬದಲಿಸಿ ಕೊಡುವ ನೆಪದಲ್ಲಿ ಎಂಟು ದಿವಸ ಮಹಿಳೆಯ ಗ್ಯಾಂಗ್‌ರೇಪ್
ಬರೇಲಿ, ಡಿ. 4: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನೋಟು ಬದಲಿಸುವ ನೆಪದಲ್ಲಿ ಮಹಿಳೆಯೊಬ್ಬರನ್ನು ಎಂಟು ದಿವಸಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ. ಶಾಹಿ ಠಾಣಾ ವ್ಯಾಪ್ತಿಯ ಖುರ್ರಮ್‌ಪುರ್ ಗ್ರಾಮದ ಮಹಿಳೆಯೊಬ್ಬರು ಕೆಲವುದಿವಸಗಳಿಮದ ನೋಟು ಬದಲಾಯಿಸಲು ಬ್ಯಾಂಕ್‌ಗೆ ಹೋಗಿ ಬರೀಗೈಯಲ್ಲಿ ಮರಳುತ್ತಿದ್ದರು. ಅವರಿಗೆ ಹಳೆ ನೋಟನ್ನು ಬದಲಾಯಿಸಲು ಸಾಧ್ಯವಾಗಿರಲಿಲ್ಲ. ಈ ನಡುವೆ ಕೆಲವು ಯುವಕರು ಮಹಿಳೆಯ ನೋಟನ್ನು ಬದಲಾಯಿಸಿ ಕೊಡುವ ಭರವಸೆ ಕೊಟ್ಟು ಕರೆದು ಕೊಂಡು ಹೋಗಿದ್ದಾರೆ. ಅವರ ಜೊತೆಹೋದ ಮಹಿಳೆಗೆ ಚಾ ಮತ್ತು ಪಕೋಡ ತೆಗೆಸಿಕೊಟ್ಟಿದ್ದಾರೆ. ಅದರಲ್ಲಿ ಅಮಲು ಪದಾರ್ಥ ಬೆರೆಸಿ ಪ್ರಜ್ಞೆ ಕಳಕೊಳ್ಳುವಂತೆ ಮಾಡಿದ್ದಾರೆ. ಪ್ರಜ್ಞೆ ಮರಳಿದಾಗ ಇಬ್ಬರು ಹುಡುಗರೊಂದಿಗೆ ತಾನಿರುವುದು ಅವರಿಗೆ ಅರಿವಾಗಿತ್ತು. ಅತ್ಯಾಚಾರಕ್ಕೊಳಗಾದ ಮಹಿಳೆ ನವೆಂಬರ್ ಹನ್ನೊಂದನೆ ತಾರೀಕಿನಿಂದ ನವೆಂಬರ್ ಹತ್ತೊಂಬತ್ತು ತಾರೀಕಿನವರೆಗೆ ಒಂದು ಕೋಣೆಯಲ್ಲಿ ಬಂಧನದಲ್ಲಿ ಇರಿಸಿ ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಂದು ಹೇಳಿದ್ದಾರೆ.
ನವೆಂಬರ್ ಇಪ್ಪತ್ತನೆ ತಾರೀಕಿನಂದು ಅಲ್ಲಿಂದ ಹೇಗೋ ಮಾಡಿ ತಪ್ಪಿಸಿಕೊಳ್ಳುವಲ್ಲಿ ಮಹಿಳೆ ಯಶಸ್ವಿಯಾಗಿದ್ದರು. ಅಲ್ಲಿಂದ ಹೊರಬಂದ ಮೇಲೆ ತಾನು ಕಾಸಗಂಜ್ ಎಂಬ ಸ್ಥಳದಲ್ಲಿದ್ದೇನೆಂದು ಮಹಿಳೆಗೆ ಅರಿವಾಗಿತ್ತು. ನಂತರ ಕುಟುಂಬದವರಿಗೆ ತನ್ನಮೇಲಾದ ದೌರ್ಜನ್ಯವನ್ನು ಆಕೆ ತಿಳಿಸಿದ್ದು ಪತಿಯೊಂದಿಗೆ ಠಾಣೆಗೆ ದೂರು ನೀಡಲು ಬಂದಿದ್ದಾರೆ. ಆದರೆ ಪೊಲೀಸರು ದೂರುದಾಖಲಿಸದೆ ಅಲ್ಲಿಂದ ಅಟ್ಟಿದ್ದರು ಎನ್ನಲಾಗಿದೆ.
ನಂತರ ದೂರು ದಾಖಲಿಸಲು ಪೊಲೀಸರಿಗೆ ಎರಡು ಸಾವಿರ ರೂಪಾಯಿ ನೀಡಬೇಕಾಯಿತು ಎಂದು ಮಹಿಳೆಯ ಪತಿ ಆರೋಪಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ವರದಿ ತಿಳಿಸಿದೆ.