ಪೊರಕೆ ಹಿಡಿಯುವುದು ಎಂದರೆ ವ್ರತ ಕೈಗೊಂಡಂತೆ- ಸ್ವಾಮಿ ಧರ್ಮವೃತಾನಂದಜೀ ಮಹಾರಾಜ್

Update: 2016-12-04 11:34 GMT

ಪುತ್ತೂರು,ಡಿ 4: ಸ್ವಚ್ಚತೆ ವಿಚಾರದಲ್ಲಿ ಪೊರಕೆ ಹಿಡಿಯುವುದು ಎಂದರೆ ವ್ರತ ಕೈಗೊಂಡಂತೆ. ಈ ವ್ರತ ಎಂದಿಗೂ ಅರ್ಧದಲ್ಲಿ ನಿಲ್ಲಬಾರದು. ಪುತ್ತೂರು ಸಂಪೂರ್ಣ ಸ್ವಚ್ವವಾಗುವ ತನಕ ವ್ರತಭಂಗವಾಗದಿರಲಿ. ಎಲ್ಲರೂ ಈ ವ್ರತವನ್ನು ಕೈಗೊಳ್ಳಬೇಕು ಎಂದು ಮಂಗಳೂರು ರಾಮಕೃಷ್ಣ ಮಿಷನ್‌ನ ಸ್ವಾಮಿ ಧರ್ಮವೃತಾನಂದಜೀ ಮಹಾರಾಜ್ ಹೇಳಿದರು.

ಅವರು ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರಾಮಕೃಷ್ಣ ಮಿಷನ್ ಮಠದ ವತಿಯಿಂದ ಪುತ್ತೂರನ್ನೂ ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ "ಸ್ವಚ್ಚ ಪುತ್ತೂರು" ಎಂಬ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.ರಾಮಕೃಷ್ಣ ಮಠ ಮತ್ತು ವಿಶನ್ ಆದರ್ಶ ತೋರಿಸುವ ಕೆಲಸ ಮಾತ್ರವೇ ಮಾಡುತ್ತದೆ. ಈ ಕೆಲಸ ಎಲ್ಲರಿಗೂ ಪ್ರೇರಣೆಯಾಗಬೇಕು, ಜನರ ಸಹಭಾಗಿತ್ವ ಬೇಕು. ಎಲ್ಲಾ ಕಡೆ ಆಶ್ರಮವೇ ಹೋಗಿ ಸ್ವಚ್ಚತೆ ಮಾಡಲು ಆಗುವುದಿಲ್ಲ. ಯುವಕರ ತಂಡ ಈ ನಿಟ್ಟಿನಲ್ಲಿ ಸಿದ್ದವಾಗಬೇಕು ಎಂದರು.

ಅತಿಥಿಯಾಗಿದ್ದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ ಸ್ವಚ್ಚತೆ ಪ್ರತಿಯೊಬ್ಬರ ಬದುಕಿನ ಅಂಗವಾಗಬೇಕು. ಸಣ್ಣ ಸಣ್ಣ ಕೆಲಸ ಮಾಡುವ ಮೂಲಕ ಬದಲಾವಣೆ ಆರಂಭವಾಗಬೇಕು. ಕಸ ಉತ್ಪಾದನೆಯಾಗುವುದಕ್ಕೆ ಯಾರು ಕಾರಣ ಎನ್ನುವುದರ ಅರಿವು ಬೆಳೆಯಬೇಕು. ಇದರಿಂದ ಮನೆ, ಊರು, ಗ್ರಾಮ ಸ್ವಚ್ಚತೆಯಾಗಲು ಸಾಧ್ಯವಿದೆ ಎಂದರು.

ವೈದ್ಯ ಡಾ. ಎಂ.ಕೆ. ಪ್ರಸಾದ್ ಮಾತನಾಡಿ ದೇಶದಲ್ಲಿ ಕಸ ಎಸೆಯುವ ಬಗ್ಗೆಯೇ ಜಾಗೃತಿಯಾಗಬೇಕು. ಸ್ವ ಜಾಗೃತಿಯೊಂದಿಗೆ ಕಸ ವಿಲೇವಾರಿಗೂ ವ್ಯವಸ್ಥೆ ಆಗಬೇಕು. ದೇಶದಲ್ಲಿ ತ್ಯಾಜ್ಯ ನಿರ್ವಹಣಾ ಸಚಿವರು ಬೇಕು. ದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ ಎಂದರು.

 ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ ಮನೆಯಿಂದಲೇ ಸ್ವಚ್ಚತೆ ಆರಂಭವಾಗಬೇಕು. ಎಲ್ಲರೂ ಕೈಜೋಡಿಸಿದಾಗ ಯಶಸ್ಸು ಸಾಧ್ಯವಿದೆ. ಕ್ರಿಯಾಶೀಲತೆ ಯಿಂದ ಕೂಡಿರುವ ಯುವಕರ ಸಂಘಟನೆ ಬೆಳೆಯಬೇಕು, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವಿನೋದ್ ನಗರ ಸ್ವಾಗತಿಸಿ ಶ್ರೀಕೃಷ್ಣ ಉಪಾಧ್ಯಾಯ ಪ್ರಸ್ತಾವನೆಗೈದರು. ನಿಕೇತ್‌ರಾಜ್ ಮೌರ್ಯ ವಂದಿಸಿದರು. ಶ್ಯಾಮಸುದರ್ಶನ ಭಟ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News