"ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ"ಯ ಬಗ್ಗೆ ಅರಿತುಕೊಳ್ಳಿ : ವಕೀಲೆ ಶ್ವೇತಾ ಜೈನ್
ಮೂಡುಬಿದಿರೆ,ಡಿ. 4 : ಮಕ್ಕಳ ಗ್ರಾಮಸಭೆಗಳನ್ನು ಆಯೋಜಿಸುವುದರಿಂದ ಮಕ್ಕಳಿಗಾಗುತ್ತಿರುವ ಸಮಸ್ಯೆಗಳನ್ನು ಅರಿಯಲು ಸುಲಭ ಸಾಧ್ಯವಾಗುತ್ತದೆ. ಮಕ್ಕಳು ತಮ್ಮ ಸುರಕ್ಷತೆಗಾಗಿ ಇರುವ ಹಲವಾರು ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಅನಿವಾರ್ಯವಾಗಿದ್ದರೆ ಮಾತ್ರ ಅವುಗಳನ್ನು ಬಳಸಿಕೊಂಡು ರಕ್ಷಣೆಯನ್ನು ಪಡೆದುಕೊಳ್ಳಬೇಕು ಎಂದು ವಕೀಲೆ ಶ್ವೇತಾ ಜೈನ್ ಹೇಳಿದರು.
ಅವರು ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯ 2016-17ನೇ ಸಾಲಿನ ಪಂಚಾಯತ್ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಪಂಚಾಯತ್ ಸಭಾಭವನದಲ್ಲಿ ಏರ್ಪಡಿಸಿದ್ದ "ಮಕ್ಕಳ ಗ್ರಾಮಸಭೆ"ಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ "ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ"ಯ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ವಿದ್ಯಾರ್ಥಿಗಳ ಜತೆಗೂಡಿ ದೀಪ ಬೆಳಗಿಸುವ ಮೂಲಕ ಗ್ರಾಮಸಭೆಯನ್ನು ಉದ್ಘಾಟಿಸಿದರು.
ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕ ದೇಜಪ್ಪ ಅವರು ಮಾತನಾಡಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆ ಹೆತ್ತವರು ಜಾಗೃತರಾಗಬೇಕು. ಮ್ಕಳ ಚಲನವಲನಗಳ ಬಗ್ಗೆ ನಿಗಾ ಇರಲಿ. ಮಕ್ಕಳ ಅಪಹರಣದ ವದಂತಿಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಆದರೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲವೆಂದು ತಿಳಿಸಿದ ಅವರು ವಿದ್ಯಾರ್ಥಿಗಳು ಅಪರಿಚಿತರ ಜೊತೆ ಸಲುಗೆ ಬೆಳೆಸಿಕೊಳ್ಳಬೇಡಿ. ಶಾಲೆಗೆ ಬರುವಾಗ ಮತ್ತು ಮನೆಗೆ ಹೋಗುವಾಗ ಗುಂಪಾಗಿ ಹೋಗುವುದರಿಂದ ಜಾಗೃತೆಯನ್ನು ಮಾಡಿಕೊಳ್ಳಬಹುದು ಎಂದು ಹೇಳಿದ ಅವರು ಹೆಣ್ಣು ಮಕ್ಕಳಿಗೆ ಗೌರವವನ್ನು ನೀಡಿ ಎಂದು ಸಲಹೆ ನೀಡಿದರು.
ಈ ಬಾರಿಯ ಎಸ್‌ಎಸ್‌ಎಲ್‌ಸಿಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯು ಬೇರೆ ಬೇರೆಯಾಗಲಿದ್ದು, ಈ ಹಿಂದೆ ನಡೆಯುತ್ತಿದ್ದ ಪರೀಕ್ಷೆಯಂತೆಯೇ ನಡೆಯಲಿದೆ ಎಂದು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಮಾಹಿತಿ ನೀಡುವಂತೆ ಬಂಗಬೆಟ್ಟು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂಜಾ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ರಾಜಶ್ರಿ ನಾಯಕ್ ಮಾಹಿತಿ ನೀಡಿ ಈ ಬಗ್ಗೆ ತಮಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲವೆಂದು ತಿಳಿಸಿದರು. ಕಂಪ್ಯೂಟರ್ ಶಿಕ್ಷಣ ಪಡೆಯಲು ಶಿಕ್ಷಕರ ಕೊರತೆ ಇದೆ ಹಾಗೂ ಕಂಪ್ಯೂಟರ್‌ಗಳು ಕೆಟ್ಟಿವೆ ಎಂದು ಎಂದು ಬಂಗಬೆಟ್ಟು ಶಾಲೆಯ ಪ್ರಶಾಂತ್ ಅಧಿಕಾರಿಗಳ ಗಮನಕ್ಕೆ ತಂದರು. ಹಿಂದೆ ಮಾಹಿತಿ ಸಿಂಧು ಯೋಜನೆಯಲ್ಲಿ ಬಂದಿರುವ ಕಂಪ್ಯೂಟರ್‌ಗಳು ಕೆಟ್ಟಿವೆ. ಇದೀಗ ಈ ತಿಂಗಳ 30ರೊಳಗೆ ಬೇರೊಂದು ಯೋಜನೆಯಲ್ಲಿ ಕಂಪ್ಯೂಟರ್ ಬರಲಿದೆ. ಅಲ್ಲದೆ ಶಾಲೆಯ ಎಲ್ಲಾ ಶಿಕ್ಷಕರುಗಳಿಗೂ ಕಂಪ್ಯೂಟರ್ ಶಿಕ್ಷಣದ ತರಬೇತಿಯನ್ನು ನೀಡಲಾಗಿದ್ದು ಅವರೇ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಬೇಕೆಂದು ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಶಾಲೆಗಳಿಗೆ ನೀಡುವ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿರುವ ಬ್ಯಾಂಡೆಡ್‌ಗಳು ಸಾಕಾಗುತ್ತಿಲ್ಲ ಇನ್ನೂ ಹೆಚ್ಚು ನೀಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು. ಅಲ್ಲದೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೆಲವು ಶಾಲೆಗಳಿಗೆ "ಶುಚಿ" ತಲುಪಿಲ್ಲವೆಂದು ಶಿಕ್ಷಕಿ ಅಧಿಕಾರಿಗಳ ಗಮನಕ್ಕೆ ತಂದರು. ಈ ಬಗ್ಗೆ ತನಿಖೆ ನಡೆಸಿ ಪ್ರತಿಶಾಲೆಗಳಿಗೂ ತಲುಪಿಸುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಪತ್ರಕರ್ತ ಬೆಳುವಾಯಿ ಸೀತಾರಾಮ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸಾಮಾಜಿಕ ಜ್ಞಾನವನ್ನು ಬೆಳೆಸಿಕೊಳ್ಳಿ. ಸಂಘರ್ಷಗಳಿಗೆ ಸೋಲಬೇಡಿ ಎಂದು ಹೇಳಿ ತಮ್ಮ ಊರಿನ ಸಮಗ್ರ ಮಾಹಿತಿಯನ್ನು ದಾಖಲಿಸುವ ಕೆಲಸ ಪಂಚಾಯತ್‌ನಿಂದ ಮಾಡಿದರೆ ಉತ್ತಮ ಎಂದು ಸಲಹೆ ನೀಡಿದರು.
ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆಯನ್ನು ವಹಿಸಿ ಪಂಚಾಯತ್ ವ್ಯಾಪ್ತಿಯ ಶಾಲೆಗಳಿಗೆ ಪಂಚಾಯತ್ ವತಿಯಿಂದ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ,
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿರುವ ವಿದ್ಯಾರ್ಥಿಗಳಿಗೆ, ಪ್ರತಿಭಾ ಕಾರಂಜಿಯಲ್ಲಿ ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.
ಪಂಚಾಯತ್ ಉಪಾಧ್ಯಕ್ಷೆ ಹೇಮಾವತಿ ಕುಲಾಲ್, ಸದಸ್ಯರಾದ ರಮೇಶ್ ಶೆಟ್ಟಿ, ಕರುಣಾಕರ ಶೆಟ್ಟಿ, ಉಮಾವತಿ ದಿನೇಶ್, ಬಂಗಬೆಟ್ಟು ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಕುಲಾಲ್, ನಿರ್ಕೇರೆ ಶಾಲೆಯ ಶಿಕ್ಷಕ ಕರುಣಾಕರ ಮತ್ತಿತರರು ಉಪಸ್ಥಿತರಿದ್ದರು.
ಮಕ್ಕಳ ಗ್ರಾಮಸಭೆಗೆ ಪ್ರಾಯೋಜಕತ್ವ ನೀಡಿ ಸಹಕರಿಸಿರುವ ಸಂತೆಕಟ್ಟೆ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಮೂಡುಬಿದಿರೆ ಎಸ್.ಪಿ.ಟಿ ಕನ್ಸ್‌ಟ್ರಕ್ಸನ್‌ನ ಮಾಲಕರನ್ನು ಗೌರವಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇದಕ್ಕೂ ಮೊದಲು ಶಿಕ್ಷಣ ಹಾಗೂ ಸ್ವಚ್ಛತೆಯ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಶ್ವತ್ಥಪುರದಿಂದ ನೀರ್ಕೆರೆವರೆಗೆ ವಿದ್ಯಾರ್ಥಿಗಳ ಜಾಥಾ ನಡೆಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯುವ ಮೂಲಕ ಮಾದರಿ ಮಕ್ಕಳ ಗ್ರಾಮಸಭೆಯಾಗಿ ಮೂಡಿ ಬಂತು.