ಹೆಜಮಾಡಿ- ಕುಂದಾಪುರದವರೆಗೆ ರಾ.ಹೆ 66 ಕಾಮಗಾರಿ ಸಂದರ್ಭ ಅಪಘಾತದಲ್ಲಿ ಮೃತಪಟ್ಟವರು ಎಷ್ಟು ಮಂದಿ?

Update: 2016-12-04 14:18 GMT

ಉಡುಪಿ, ಡಿ.4: ಭಾರತದಲ್ಲಿ ಪ್ರತಿವರ್ಷ ರಸ್ತೆ ಅಪಘಾತಕ್ಕೆ 6ಲಕ್ಷ ಮಂದಿ ಬಲಿಯಾಗುತ್ತಿದ್ದಾರೆ. ಇದು ಚೀನಾ ದೇಶಕ್ಕಿಂತ ಹೆಚ್ಚು. ಕಳೆದ ಆರು ವರ್ಷ ಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಹೆಜಮಾಡಿಯಿಂದ ಕುಂದಾಪುರದವರೆಗೆ ಒಟ್ಟು 600 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಮೀನುಗಾರಿಕೆ, ಯುವ ಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ರೆಡ್‌ಕ್ರಾಸ್ ಭವನದಲ್ಲಿ ಇಂದು ನಡೆದ ರಾಜ್ಯ ಆಡಳಿತ ಸಮಿತಿಯ ಸಭೆಯಲ್ಲಿ ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆಯ ಕುರಿತ ಆನ್‌ಲೈನ್ ಮೂಲಕ ದೂರ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಮ್ಮ ದೇಶದಲ್ಲಿನ ಭ್ರಷ್ಟಾಚಾರದಿಂದಾಗಿ ವಾಹನ ಚಲಾಯಿಸಲು ಬಾರದ ವರಿಗೂ ಲೈಸನ್ಸ್ ಸಿಗುತ್ತದೆ. ಒಂದು ಅರ್ಥದಲ್ಲಿ ಇದು ಜನರನ್ನು ಕೊಲ್ಲಲು ನೀಡುತ್ತಿರುವ ಲೈಸನ್ಸ್ ಆಗಿದೆ. ಅದೇ ರೀತಿ ಅಪಘಾತ ಸಂಭವಿಸಿದ ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಆಗುತ್ತಿರುವ ವಿಳಂಬ ಮತ್ತು ಪ್ರಥಮ ಚಿಕಿತ್ಸೆಯ ಕೊರತೆಯಿಂದ ಹೆಚ್ಚು ಮಂದಿ ಸಾಯುತ್ತಿದ್ದಾರೆ ಎಂದು ಅವರು ಹೇಳಿದರು.

ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ ಹಾಗೂ ತರಬೇತಿ ನೀಡಿದ್ದಲ್ಲಿ ಅಪಘಾತದಿಂದ ಹೆಚ್ಚು ಮಂದಿ ಸಾಯುವುದನ್ನು ತಡೆಯಲು ಸಾಧ್ಯವಿದೆ. ಅದೇ ರೀತಿ ಚಾಲಕರಿಗೆ ವಾಹನ ಚಲಾಯಿಸುವ ಕುರಿತು ನಿಯಮಗಳ ಬಗ್ಗೆಯೂ ತರಬೇತಿ ನೀಡುವ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಹಾಸನ ರೆಡ್‌ಕ್ರಾಸ್ ಸಭಾಪತಿ ಮೋಹನ್ ಗೌಡ, ಗದಗ ಸಭಾಪತಿ ಶ್ರೀನಿವಾಸ ಹುಯಿಲುಗೋಳ, ಅಂತಾರಾಷ್ಟ್ರೀಯ ಮಟ್ಟದ ವಿಪತ್ತು ನಿರ್ವಹಣೆಯ ತರಬೇತುದಾರ ಡಾ.ಕುಮಾರ್ ವಿ.ಎಲ್.ಎಸ್. ಸಹಿತ ಹಲವು ಮಂದಿಯನ್ನು ಸನ್ಮಾನಿಸಲಾಯಿತು. ವೈದ್ಯಕೀಯ ನೆರವು ಮತ್ತು ಸಲಕರಣೆಗಳನ್ನು ವಿತರಿಸಲಾಯಿತು.

ಜಿನೇವಾ ಒಪ್ಪಂದ ದಿನಾಚರಣೆಯಲ್ಲಿ ಅತಿಹೆಚ್ಚು ನಿಧಿ ಸಂಗ್ರಹಣೆ ಮಾಡಿದ ಮಣಿಪಾಲ ಮಾಧವ ಪೈ ಮೆಮೋರಿಯಲ್ ಕಾಲೇಜು, ಹಿರಿಯಡ್ಕ ಸರಕಾರಿ ಪದವಿ ಕಾಲೇಜು, ಅಜ್ಜರಕಾಡು ಮಹಿಳಾ ಸರಕಾರಿ ಕಾಲೇಜುಗಳಿಗೆ ಕ್ರಮವಾಗಿ 10ಸಾವಿರ, 8ಸಾವಿರ ಮತ್ತು 6ಸಾವಿರ ರೂ. ವೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು.

ರೆಡ್‌ಕ್ರಾಸ್ ಕರ್ನಾಟಕ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ಅಪ್ಪ ರಾವ್, ಜಿಲ್ಲಾ ಸಭಾಪತಿ ಉಮೇಶ್ ಪ್ರಭು, ಉಪಾಧ್ಯಕ್ಷ ಡಾ.ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ರಾಜ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಜಯರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಥಮ ಚಿಕಿತ್ಸಾ ತರಬೇತಿಯ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News