ಸಾಹಿತ್ಯದಿಂದ ಸಮಾಜ ಕಟ್ಟುವ ಕೆಲಸ: ವೈದೇಹಿ

Update: 2016-12-04 13:20 GMT

ಮಂಗಳೂರು, ಡಿ.4 : ಆಧುನಿಕ ಜನತೆ ಸಾಹಿತ್ಯದ ಕೋರ್ಸ್‌ಗಳಿಗಿಂತಲೂ ಆರ್ಥಿಕ ಲಾಭದಾಯಕ ಕೋರ್ಸ್‌ಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಸಾಹಿತ್ಯದಿಂದ ಸಮಾಜ ಕಟ್ಟುವ ಕೆಲಸವಾಗುತ್ತಿದೆ ಎಂದು ಹಿರಿಯ ಸಾಹಿತಿ ವೈದೇಹಿ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಮಣಿಪಾಲ ವಿವಿಯ ಡಾ. ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠ ಹಾಗೂ ಮಂಗಳೂರು ವಿವಿ ಡಾ. ಕೆ.ಶಿವರಾಮ ಕಾರಂತ ಪೀಠದ ಸಹಯೋಗಲ್ಲಿ ರವಿವಾರ ನಡೆದ ಮಹಾಶ್ವೇತಾದೇವಿ ಸಮರ್ಪಿತ ‘ಸೃಜನಶೀಲ ಬರವಣಿಗೆ ಕುರಿತ’ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್, ಯುವ ಜನಾಂಗವು ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗಿದೆ. ಓದು, ಬರೆಯುವ ಹವ್ಯಾಸದಿಂದ ವಿಮುಖರಾಗುತ್ತಿದೆ. ಇದರಿಂದ ಸೃಜನಶೀಲತೆ ಮಾಯವಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳು ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಮತ್ತೆ ಅವರನ್ನು ಸಾಹಿತ್ಯದತ್ತ ಆಸಕ್ತಿ ಹುಟ್ಟಿಸಬೇಕಾಗಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕಾರ್ಯಾಗಾರದ ನಿರ್ದೇಶಕಿ ಡಾ. ಎಂ.ಎಸ್.ಆಶಾದೇವಿ ಮಾತನಾಡಿ, ಸೃಜನಶೀಲತೆ ಎನ್ನುವುದು ಬದುಕಿಗೆ ಗೌರವ ತಂದುಕೊಡುವುದರೊಂದಿಗೆ ಜೀವನದ ಪಾಠವನ್ನೂ ಕಲಿಸುತ್ತದೆ. ಹಾಗಾಗಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.

ವೇದಿಕೆಯಲ್ಲಿ ವಿವಿ ಕಾಲೇಜಿನ ಪ್ರಾಧ್ಯಾಪಕಿ ಡಾ. ರಾಜಲಕ್ಷ್ಮೆ ಎನ್.ಕೆ. ಉಪಸ್ಥಿತರಿದ್ದರು. ಸಾಹಿತಿ ಭುವನೇಶ್ವರಿ ಹೆಗಡೆ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News