ಧಾರ್ಮಿಕ ತಿಳುವಳಿಕೆಯಿಂದ ಸಾಮಾಜಿಕ ನೆಮ್ಮದಿ: ಫಾರೂಕ್ ನಈಮಿ

Update: 2016-12-04 13:39 GMT

ಮಂಗಳೂರು, ಡಿ. 4: ಅನಾಚಾರ, ಅತ್ಯಾಚಾರಗಳು ಹೆಚ್ಚುತ್ತಿದ್ದು, ಇದಕ್ಕೆ ಧಾರ್ಮಿಕ ತಿಳುವಳಿಕೆಯ ಕೊರತೆಯೇ ಕಾರಣವಾಗಿದೆ ಎಂದು ಫಾರೂಕ್ ನಈಮಿ ಕೊಲ್ಲಂ ಅಭಿಪ್ರಾಯಪಟ್ಟಿದ್ದಾರೆ.

ಅವರು ಉಳ್ಳಾಲ ಅಲ್ ಮದೀನದಲ್ಲಿ ಶನಿವಾರ ನಡೆದ ಹುಬ್ಬುರ್ರಸೂಲ್ ಕಾನ್ಫರೆನ್ಸ್ -2016ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ಯುವಜನರಿಗೆ ಧಾರ್ಮಿಕ ತಿಳುವಳಿಕೆ ನೀಡುವ ಕೆಲಸ ಅಗತ್ಯ ಆಗಬೇಕಾಗಿದೆ. ಈ ಮೂಲಕ ಸಾಮಾಜಿಕ ಸಂಘರ್ಷಗಳಿಗೆ ಕಡಿವಾಣ ಹಾಕಿ ಸಾಮಾಜಿಕ ನೆಮ್ಮದಿ ನೆಲೆಸಲು ಸಾಧ್ಯವಿದೆ ಎಂದು ಫಾರೂಕ್ ನಈಮಿ ಹೇಳಿದರು.

 ದೇಶದಲ್ಲಿ ನಡೆಯುವ ಯಾವುದೇ ಸಂಘರ್ಷಕ್ಕೆ ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಧರ್ಮದ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ಹತ್ತಿಕ್ಕುವ ಕೆಲಸ ಆಗಬೇಕು. ಇಸ್ಲಾಮಿನ ಬಗ್ಗೆ ಜನರಿಗೆ ಇರುವ ಜ್ಞಾನದ ಕೊರತೆಯಿಂದ ಇಂತಹ ಕೃತ್ಯಗಳು ಮರುಕಳಿಸುತ್ತಿವೆ. ಪ್ರವಾದಿ ಮುಹಮ್ಮದ್ (ಸ)ರ ಬೋಧನೆ ಮತ್ತು ಕುರ್‌ಆನ್‌ನ ಆದೇಶಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಅಲ್ ಮದೀನ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಫಿ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಯ್ಯದ್ ಇಸ್ಮಾಯೀಲ್ ಹಾದಿ ತಂಙಳ್ ದುವಾ ನೆರವೇರಿಸಿದರು. ವೇದಿಕೆಯಲ್ಲಿ ಹಾಫಿಳ್ ಅಬ್ದುಲ್ ರಹ್ಮಾನ್ ಸಖಾಫಿ, ಎಸ್‌ಎಂಎ ಉಳ್ಳಾಲ ಝೋನ್ ಕಾರ್ಯದರ್ಶಿ ಇಸ್ಮಾಯೀಲ್ ಸಅದಿ ಉರುಮಣೆ, ಸುನ್ನಿ ಪೈಝಿ, ಕೆ.ಇ.ಸಾಲೆತ್ತೂರು, ಏಷ್ಯನ್ ಬಾವಾ ಹಾಜಿ, ಯು.ಟಿ. ಇಫ್ತಿಕಾರ್, ತಾ.ಪಂ. ಅಧ್ಯಕ್ಷ ಮೋನು, ನರಿಂಗಾನ ಗ್ರಾ.ಪಂ. ಅಧ್ಯಕ್ಷ ಇಸ್ಮಾಯೀಲ್ ಮೀನಂಕೋಡಿ, ಎನ್.ಎಸ್. ಕರೀಂ, ಹಸನ್ ಹಾಜಿ ಸಾಂಬಾರ್‌ತೋಟ, ಆಲಿಕುಂಞಿ ಪಾರೆ. ಶೌಕತ್ ಹಾಜಿ ದೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಅಲ್ ಮದೀನ ಮ್ಯಾನೇಜರ್ ಖಾದರ್ ಸಖಾಫಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News