ಕೃಷ್ಣಮಠದಲ್ಲಿ ದತ್ತಮಾಲೆ ಅಭಿಯಾನಕ್ಕೆ ಚಾಲನೆ
ಉಡುಪಿ, ಡಿ.4:ಚಿಕ್ಕಮಗಳೂರು ಜಿಲ್ಲೆ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರುದತ್ತಾತ್ರೇಯ ಸ್ವಾಮಿಯ ದತ್ತಪೀಠದಲ್ಲಿ ಡಿ.13ರಂದು ನಡೆಯುವ ದತ್ತಜಯಂತಿ ಸಲುವಾಗಿ ದತ್ತಮಾಲಾ ಅಭಿಯಾನಕ್ಕೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಬಜರಂಗ ದಳದ ಕಾರ್ಯಕರ್ತರಿಗೆ ದತ್ತಮಾಲೆ ತೊಡಿಸುವ ಮೂಲಕ ಇಂದು ಚಾಲನೆ ನೀಡಿದರು.
ಹಿಂದುಗಳ ಶ್ರದ್ಧಾಕೇಂದ್ರವಾದ ದತ್ತಪೀಠದಲ್ಲಿ ಕಳೆದ ಹಲವು ವರ್ಷಗಳಿಂದ ದತ್ತಮಾಲಾ ಅಭಿಯಾನ ನಡೆಯುತ್ತಿದೆ. ಇದು ಅತ್ಯಂತ ಶಾಂತಿಯುತವಾಗಿ ನಡೆಯಬೇಕಾಗಿದೆ.ದತ್ತಮಾಲೆ ಹಿಂದೂಧರ್ಮದ ರಕ್ಷಣೆಯ ಮಾಲೆ ಎಂದವರು ನುಡಿದರು.
ಈ ಬಾರಿಯ ದತ್ತಮಾಲಾ ಅಭಿಯಾನದಲ್ಲಿ ರಾಜ್ಯದಿಂದ ಸುಮಾರು 50ಸಾವಿರಕ್ಕೂ ಅಧಿಕ ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ಅಭಿಯಾನ ಡಿ.13ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನದೊಂದಿಗೆ ಸಮಾಪನಗೊಳ್ಳಲಿದೆ ಎಂದು ವಿಶ್ವಹಿಂದು ಪರಿಷತ್‌ನ ರಾಜ್ಯ ಸಂಚಾಲಕ ಪ್ರೊ.ಎಂ.ಬಿ.ಪುರಾಣಿಕ್ ತಿಳಿಸಿದರು.
ಈ ಬಾರಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಗಳ ನ್ನೊಳಗೊಂಡ ಮಂಗಳೂರು ವಿಭಾಗದಿಂದ 20,000 ಮಂದಿ ಬಜರಂಗ ದಳದ ಕಾರ್ಯಕರ್ತರು ದತ್ತಪೀಠಕ್ಕೆ ತೆರಳಲಿದ್ದಾರೆ.
ಡಿ.11ರಂದು ದತ್ತಪೀಠದಲ್ಲಿ ವಿವಿದ ಪೂಜೆ, ಹೋಮಗಳು, ಬೆಳಗ್ಗೆ ನಗರದಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ, ಡಿ.12ರಂದು ಚಿಕ್ಕಮಗಳೂರು ನಗರದಲ್ಲಿ ದತ್ತಮಾಲಾಧಾರಿಗಳಿಂದ ಶೋಭಾಯಾತ್ರೆ, ಧಾರ್ಮಿಕ ಸಭೆ ನಡೆಯಲಿದೆ ಎಂದು ಬಜರಂಗದಳದ ಪ್ರಾಂತ ಸಂಯೋಜಕರಾದ ಶರಣ್ ಪಂಪ್‌ವೆಲ್ ತಿಳಿಸಿದರು.
ಇಂದು ಶರಣ್ ಪಂಪ್‌ವೆಲ್ ಅಲ್ಲದೇ ವಿಭಾಗ ಸಹಸಂಯೋಜಕ ಸುನಿಲ್ ಕೆ.ಆರ್., ಬಜರಂಗ ದಳ ಉಡುಪಿ ಜಿಲ್ಲಾ ಸಂಯೋಜಕ ದಿನೇಶ್ ಮೆಂಡನ್ ಸೇರಿದಂತೆ ಅನೇಕ ವುಂದಿ ದತ್ತಮಾಲೆ ಧಾರಣೆ ಮಾಡಿದರು.