ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಉಡುಪಿಗೆ

Update: 2016-12-04 15:26 GMT

 ಉಡುಪಿ, ಡಿ.4: ಜಿಲ್ಲೆಯ ಹೆಜಮಾಡಿಯಲ್ಲಿ ಡಿ.25ರ ರವಿವಾರ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ವತಿಯಿಂದ ಆಯೋಜಿಸಲಾಗುತ್ತಿರುವ ವಿಶ್ವ ಜಿಎಸ್‌ಬಿ ಸಮ್ಮೇಳನಕ್ಕೆ ಕೇಂದ್ರ ರಕ್ಷಣಾ ಸಚಿವ ಮನೋಹರ ಗೋಪಾಲಕೃಷ್ಣ ಪ್ರಭು ಪರಿಕ್ಕರ್ ಸೇರಿದಂತೆ ಅನೇಕ ಮಂದಿ ಗಣ್ಯರು ಆಗಮಿಸಲಿದ್ದಾರೆ.

ಕೇಂದ್ರ ರಕ್ಷಣಾ ಸಚಿವರಾದ ಬಳಿಕ ಪ್ರಥಮ ಬಾರಿಗೆ ಅವಿಭಜಿತ ದ.ಕ ಜಿಲ್ಲೆಗೆ ಆಗಮಿಸುತ್ತಿರುವ ಪರಿಕ್ಕರ್, ವೇದಿಕೆಯ ‘ದೇಶ ಮೊದಲು’ ಎಂಬ ರಾಷ್ಟ್ರೀಯ ಚಿಂತನೆಯ ಪರಿಕಲ್ಪನೆಯಲ್ಲಿ ಮೂಡಿ ಬಂದ, ಗಾಯಾಳು ಸೈನಿಕರ ಕಲ್ಯಾಣ ನಿಧಿಗೆ ನೀಡಲು ಉದ್ದೇಶಿಸಿರುವ ‘ರಾಷ್ಟ್ರ ರಕ್ಷಾನಿಧಿ’ಯನ್ನು ಸ್ವೀಕರಿಸಿ ಮಾತನಾಡಲಿದ್ದಾರೆ.

 ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸಂಘಟನೆಯ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಲಿರುವ ವಿಶ್ವ ಜಿಎಸ್‌ಬಿ ಸಮ್ಮೇಳನದಲ್ಲಿ ರಾಷ್ಟ್ರೀಯ ನಾಯಕರ ಜೊತೆಗೆ ಹಲವಾರು ಗಣ್ಯರು ದೇಶ-ವಿದೇಶಗಳಿಂದ ಪಾಲ್ಗೊಳ್ಳಲಿದ್ದಾರೆ ಎಂದು ವೇದಿಕೆಯ ಪಧಾಧಿಕಾರಿಗಳು ತಿಳಿಸಿದ್ದಾರೆ.

   ನಾಗಾಲ್ಯಾಂಡಿನ ರಾಜ್ಯಪಾಲ, ಉಡುಪಿ ಮೂಲದ ಪದ್ಮನಾಭ ಬಾಲಕೃಷ್ಣ ಆಚಾರ್ಯ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಸಮ್ಮೇಳನದ ಅಧ್ಯಕತೆಯನ್ನು ಡಾ.ಪಿ. ದಯಾನಂದ ಪೈ ವಹಿಸಲಿದ್ದಾರೆ.

ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು, ಮಣಿಪಾಲ ಗ್ಲೋಬಲ್ ಎಜುಕೇಶನ್‌ನ ಅಧ್ಯಕ್ಷ ಟಿ.ವಿ. ಮೋಹನದಾಸ ಪೈ, ಗೋವಾ-ಪಣಜಿ ಶಾಸಕ ಸಿದ್ದಾರ್ಥ ಕುಂಕೊಲಿಕರ್, ಸುಪ್ರೀಂ ಕೋರ್ಟ್‌ನ ನ್ಯಾಯವಾದಿ ಮುಂಬಯಿಯ ಎಂ.ವಿ.ಕಿಣಿ, ಜ್ಯೋತಿ ಲ್ಯಾಬೊರೇಟರ್ಸ್‌ನ ಜೆಎಂಡಿ ಬೆಂಗಳೂರಿನ ಉಲ್ಲಾಸ್ ಕಾಮತ್, ಅನಿವಾಸಿ ಭಾರತೀಯ, ಪ್ರಸ್ತುತ ಅಮೇರಿಕಾದಲ್ಲಿ ಉದ್ಯಮಿಯಾಗಿರುವ ಕಾರ್ಕಳ ಮೂಲದ ಸುರೇಶ್ ಶೆಣೈ, ಮೈಸೂರಿನ ಹೆಸರಾಂತ ಉದ್ಯಮಿಗಳಾದ ಜಗನ್ನಾಥ ಶೆಣೈ, ಬಿ. ಸುಬ್ರಾಯ ಬಾಳಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಲಿದ್ದಾರೆ.

ಸಿದ್ಧತೆ:

ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಸೆಂಚುರಿ ಗ್ರೂಪ್ಸ್‌ನ ಸಿಎಂಡಿ ಡಾ.ಪಿ. ದಯಾನಂದ ಪೈ ನೇತೃತ್ವದ ಸಮ್ಮೇಳನ ವ್ಯವಸ್ಥಾಪನಾ ಸಮಿತಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ದೇಶ ವಿದೇಶದಿಂದ ಸುಮಾರು 30,000ಕ್ಕೂ ಅಧಿಕ ಜಿಎಸ್‌ಬಿ ಸಮಾಜ ಬಾಂಧವರು ಈ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ರಾಷ್ಟ್ರ ರಕ್ಷಾನಿಧಿ ಬೈಕ್ ರ್ಯಾಲಿ

ತಾಯ್ನಡಿನ ರಕ್ಷಣೆ ಮಾಡುತ್ತಿರುವ ಭಾರತೀಯ ಯೋಧರ ಕಲ್ಯಾಣ ನಿಧಿಗೆ ಕೊಡುಗೆ ಸಲ್ಲಿಸುವ ಉದ್ದೇಶದಿಂದಆಯೋಜಿಸಲಾದ ‘ರಾಷ್ಟ್ರ ರಕ್ಷಾನಿಧಿ’ ಬೈಕ್ ರ್ಯಾಲಿ ಪ್ರಥಮ ಹಂತದಲ್ಲಿ ಗೋವಾದಿಂದ ಮುಲ್ಕಿಯವರೆಗೆ ಕ್ರಮಿಸಿದು, ಎರಡನೇ ಹಂತದಲ್ಲಿ ಕೇರಳದಿಂದ ಹಳೆಯಂಗಡಿಯವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿಬರಲಿದೆ. ಈಗಾಗಲೇ ರಾಷ್ಟ್ರ ಜಾಗೃತಿ ಜಾಥಾಕ್ಕೆ ಎಲ್ಲೆಡೆಯಿಂದ ಅದ್ಭುತ ಪ್ರತಿಕ್ರಿಯೆ ಲಭಿಸುತ್ತಿದೆ. ಸೈನಿಕರ ಕಲ್ಯಾಣ ನಿಧಿಗೆ ಒಂದು ಕೋಟಿ ರೂ.ಗೂ ಅಧಿಕ ದೇಣಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ.

ಸ್ವಚ್ಚತಾ ಅಭಿಯಾನ 

ಅವಿಭಜಿತ ದ.ಕ ಜಿಲ್ಲೆಯ ಗಡಿ ಭಾಗ ಹೆಜಮಾಡಿ ಟೋಲ್‌ಗೇಟ್ ಸನಿಹದಲ್ಲೇ ಇರುವ ವಿಶಾಲವಾದ ಬಸ್ತಿಪಡ್ಪು ಮೈದಾನದಲ್ಲಿ ಈಗಾಗಲೇ ಸ್ವಚ್ಚತಾ ಕಾರ್ಯ ಆರಂಭವಾಗಿದ್ದು, ಸಮ್ಮೇಳನದ ಪ್ರತಿನಿಧಿಗಳಿಗೆ ಇಲ್ಲಿ ಸುವ್ಯವಸ್ಥಿತ ಆಸನ, ವಸತಿ, ಕುಡಿಯುವ ನೀರು, ಪಾರ್ಕಿಂಗ್, ಶೌಚಾಲಯ, ಎಲ್‌ಇಡಿ ದೊಡ್ಡ ಪರದೆಗಳಲ್ಲಿ ಸಮ್ಮೇಳನದ ವೀಕ್ಷಣೆಗೆ ಸಿದ್ಧತೆ ನಡೆಯುತ್ತಿದೆ.

ಪ್ರಚಾರ ಕಾರ್ಯ

ಈಗಾಗಲೇ ಗೋವಾ, ಕೇರಳ ಹಾಗೂ ಕರ್ನಾಟಕದ ಉ.ಕ.,ದ.ಕ, ಉಡುಪಿ ಜಿಲ್ಲೆಗಳುದ್ದಕ್ಕೂ ಸಮ್ಮ್ಞೇಳನದ ಕುರಿತು ಪ್ರಚಾರ ಕಾರ್ಯವನ್ನು ನಡೆಸಲಾಗಿದೆ.ಎಲ್ಲೆಡೆ ಪೂರ್ವಭಾವಿ ಸಭೆಗಳು ನಡೆಯುತಿದ್ದು, ಈ ಮೂಲಕ ಜಿಎಸ್‌ಬಿ ಸಮಾಜ ಬಾಂಧವರಲ್ಲಿ ಉತ್ಸಾಹದ ವಾತಾವರಣ ಮೂಡಿಬರುತ್ತಿದೆ ಎಂದು ಸಮ್ಮೇಳನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ಪಿ.ದಯಾನಂದಪೈ,ಪ್ರಧಾನ ಕಾರ್ಯದರ್ಶಿ ನಂದಗೋಪಾಲ ಶೆಣೈ, ವೇದಿಕೆಯ ಸಂಚಾಲಕ ಆರ್. ವಿವೇಕಾನಂದ ಶೆಣೈ, ಅಧ್ಯಕ್ಷ ಜಿ. ಸತೀಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News