ಆರ್‌ಬಿಐ ಗವರ್ನರ್ ವೇತನವೆಷ್ಟು ಗೊತ್ತೇ ?

Update: 2016-12-04 16:06 GMT

ಹೊಸದಿಲ್ಲಿ, ಡಿ.4: ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ರೂ. 2 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ಅವರ ನಿವಾಸಕ್ಕೆ ಯಾವುದೇ ಸಹಾಯಕ ಸಿಬ್ಬಂದಿಯನ್ನು ಒದಗಿಸಲಾಗಿಲ್ಲವೆಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ.

ಸೆಪ್ಟಂಬರ್‌ನಲ್ಲಿ ಆರ್‌ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿರುವ ಡಾ.ಪಟೇಲ್ ಸದ್ಯ ಮುಂಬೈಯಲ್ಲಿರುವ ಬ್ಯಾಂಕ್‌ನ ಫ್ಲಾಟೊಂದರಲ್ಲಿ ವಾಸಿಸುತ್ತಿದ್ದಾರೆಂದು ಅದು ಹೇಳಿದೆ.

ಹಾಲಿ ಗವರ್ನರ್ ಊರ್ಜಿತ್ ಪಟೇಲ್‌ರಿಗೆ ಮನೆಯಲ್ಲಿ ಯಾವುದೇ ಸಹಾಯಕ ಸಿಬ್ಬಂದಿಯನ್ನು ಒದಗಿಸಿಲ್ಲ. ಅವರಿಗೆ 2 ಕಾರು ಹಾಗೂ ಇಬ್ಬರು ಚಾಲಕರನ್ನು ನೀಡಲಾಗಿದೆಯೆಂದು ಆರ್‌ಬಿಐ ತಿಳಿಸಿದೆ.

ಆರ್‌ಬಿಐಯ ಮಾಜಿ ಗವರ್ನರ್ ರಘುರಾಮ್ ರಾಜನ್ ಹಾಗೂ ಈಗಿನ ಗವರ್ನರ್ ಡಾ.ಪಟೇಲ್‌ರ ವೇತನದ ವಿವರ ಕೇಳಿ ಆರ್‌ಟಿಐ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು.

ಅಕ್ಟೋಬರ್‌ನಲ್ಲಿ ಪಟೇಲ್ ಇಡೀ ತಿಂಗಳು ಕೆಲಸ ಮಾಡಿದ್ದು, ಅವರಿಗೆ ರೂ. 2.09 ಲಕ್ಷ ವೇತನವಾಗಿ ಪಾವತಿಸಲಾಗಿದೆ. ಡಾ.ರಾಜನ್‌ರಿಗೆ ಆಗಸ್ಟ್‌ನ ವೇತನವಾಗಿ ಅಷ್ಟೇ ಹಣವನ್ನು ನೀಡಲಾಗಿತ್ತು. ರಾಜನ್ ಸೆ.4ರಂದು ಅಧಿಕಾರ ತ್ಯಜಿಸಿದ್ದು. 4 ದಿನಗಳ ಸಂಬಳವಾಗಿ ಅವರಿಗೆ ರೂ. 27,933 ನೀಡಲಾಗಿತ್ತೆಂದು ಆರ್‌ಬಿಐ ಮಾಹಿತಿ ನೀಡಿದೆ.

ರಾಜನ್, 2013ರ ಸೆ.5ರಂದು ಮಾಸಿಕ ರೂ. 1.69 ಲಕ್ಷ ವೇತನದ ಮೇಲೆ ಆರ್‌ಬಿಐ ಗವರ್ನರರ ಹುದ್ದೆಗೆ ನೇಮಕವಾಗಿದ್ದರು. 2014 ಹಾಗೂ 2015ರ ಮಾರ್ಚ್‌ನಲ್ಲಿ ಅವರ ವೇತನವನ್ನು ಕ್ರಮವಾಗಿ ರೂ. 1.78 ಲಕ್ಷ ಹಾಗೂ 1.87 ಲಕ್ಷಗಳಿಗೆ ಹೆಚ್ಚಿಸಲಾಗಿತ್ತು. ಈ ವರ್ಷದ ಜನವರಿಯಲ್ಲಿ ರಾಜನ್‌ರ ಸಂಬಳವನ್ನು ರೂ. 2.04 ಲಕ್ಷದಿಂದ ರೂ. 2.09 ಲಕ್ಷಕ್ಕೇರಿಸಲಾಯಿತು. ಅವರಿಗೆ 3 ಕಾರು ಹಾಗೂ ನಾಲ್ವರು ಚಾಲಕರನ್ನು ನೀಡಲಾಗಿತ್ತು. ಮುಂಬೈಯಲ್ಲಿ ರಾಜನ್‌ರಿಗೆ ಬ್ಯಾಂಕ್ ಒದಗಿಸಿದ್ದ ಬಂಗಲೆಯಲ್ಲಿ ಒಬ್ಬ ಮೇಲ್ವಿಚಾರಕ ಹಾಗೂ 9 ಮಂದಿ ಸಹಾಯಕರನ್ನು ನೀಡಲಾಗಿತ್ತೆಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News