ಅಮೆರಿಕ: ಪಾರ್ಟಿಯಲ್ಲಿ ಅಗ್ನಿಕಾಂಡ; 40 ಮಂದಿ ಜೀವಂತ ದಹನ
Update: 2016-12-04 23:56 IST
ಓಕ್‌ಲ್ಯಾಂಡ್,ಡಿ.4: ಸ್ಯಾನ್‌ಫ್ರಾನ್ಸಿಸ್ಕೊದ ಗೋದಾಮೊಂದರಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದ ರೇವ್‌ಪಾರ್ಟಿಯೊಂದರಲ್ಲಿ ಸಂಭವಿಸಿದ ಭೀಕರ ಆಗ್ನಿದುರಂತದಲ್ಲಿ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಮಧ್ಯರಾತ್ರಿ 11:30ರ ವೇಳೆಗೆ ಈ ದುರಂತ ಸಂಭವಿಸಿದೆ. ಸುಮಾರು 100 ಮಂದಿ ಭಾಗವಹಿಸಿದ್ದ ನೃತ್ಯ-ಸಂಗೀತ ಕೂಟದಲ್ಲಿ ಅಗ್ನಿಆಕಸ್ಮಿಕ ಸಂಭವಿಸಲು ಕಾರಣವೇನೆಂಬ ಬಗ್ಗೆ ಇನ್ನೂ ಮಾಹಿತಿಗಳು ಲಭ್ಯವಾಗಿಲ್ಲ. ಶನಿವಾರ ಮಧ್ಯಾಹ್ನದವರೆಗೂ ಗೋದಾಮನ್ನು ಬೆಂಕಿಯ ಜ್ವಾಲೆ ಆವರಿಸಿದ್ದರಿಂದ ರಕ್ಷಣಾ ತಂಡಗಳಿಗೆ ಒಳಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ದುರಂತದಲ್ಲಿ ಮೃತರಾದವರಲ್ಲಿ ವಿದೇಶಿ ಪ್ರಜೆಗಳೂ ಇದ್ದಾರೆನ್ನಲಾಗಿದೆ. ಮೃತರೆಲ್ಲರೂ 20ರಿಂದ 30 ವರ್ಷದೊಳಗಿನವರಾಗಿದ್ದಾರೆ. ಸುಟ್ಟು ಕರಕಲಾಗಿರುವ ಮೃತದೇಹಗಳನ್ನು ಗುರುತಿಸುವ ಕಾರ್ಯನಡೆಯುತ್ತಿದೆ.