×
Ad

ಶೀಘ್ರ ಹೊಸ ವಿದೇಶಾಂಗ ಸಚಿವರ ನೇಮಕ

Update: 2016-12-05 11:09 IST

ಹೊಸದಿಲ್ಲಿ, ಡಿ.5: ಕಿಡ್ನಿ ವೈಫಲ್ಯಕ್ಕೊಳಗಾಗಿ ಕಳೆದ ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರ ಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಪೂರ್ಣಕಾಲಿಕ ಸಚಿವರೊಬ್ಬರನ್ನು ಮುಂದಿನ ವಾರಗಳಲ್ಲಿ ನೇಮಿಸಲಿದ್ದಾರೆ. ಇದಕ್ಕಾಗಿ ಮೋದಿ ತಮ್ಮ  ಸಚಿವ ಸಂಪುಟದಲ್ಲಿರುವ ಕೆಲವೇ ಕೆಲವು ಸಮರ್ಥ ಸಚಿವರಲ್ಲಿ ಒಬ್ಬರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡುವ ಸಂಭವವಿದೆ. ಇದರಿಂದಾಗಿ ಕೆಲವು ಸಚಿವರ ಖಾತೆಗಳಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದ ಸಮಯದಲ್ಲಿ ಬದಲಾವಣೆಯಾಗುವ ಸಂಭವವಿದೆ.

ಪ್ರಸಕ್ತ ಆಸ್ಪತ್ರೆಯಲ್ಲಿರುವ ಸುಷ್ಮಾ ಸ್ವರಾಜ್ ಅವರಿಗೆ ಕಿಡ್ನಿ ದಾನಿಗಳು ದೊರೆತು ಅವರಿಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆದ ಬಳಿಕ ಅವರು ಹಲವಾರು ತಿಂಗಳುಗಳ ಕಾಲ  ತಮ್ಮ ಕಾರ್ಯಭಾರ ನಿಭಾಯಿಸಲು ಸಾಧ್ಯವಾಗದೇ ಇರುವುದರಿಂದ ಹೊಸ ಸಚಿವರನ್ನು ನೇಮಿಸುವ ಅವಶ್ಯಕತೆ ಎದುರಾಗಿದೆ. ಆಕೆಗೆ ಕಿಡ್ನಿ ದಾನಿಗಳು ದೊರೆಯುವ ತನಕ ಆಕೆ ದಿಲ್ಲಿಯ ಅಲ್ ಇಂಡಿಯಾ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲೇ ಇರಬೇಕಾಗುತ್ತದೆ.

ಪ್ರಸಕ್ತ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಮುಂದಿನ ಅಧ್ಯಕ್ಷರಾಗಿ ಅಧಿಕಾರ ವಹಿಸಲಿರುವುದರಿಂದ ಅಮೆರಿಕಾದೊಂದಿಗಿನ ಸಂಬಂಧ ಬಲವರ್ಧನೆಗೆ ಹಾಗೂ ಇನ್ನೊಂದೆಡೆ ಪಾಕಿಸ್ತಾನದೊಂದಿಗಿನ ಉದ್ವಿಗ್ನ ವಾತಾವರಣವಿರುವುದರಿಂದ ದೇಶಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಸಮರ್ಥ ವಿದೇಶಾಂಗ ವ್ಯವಹಾರಗಳ ಸಚಿವರೊಬ್ಬರನ್ನು ಹೊಂದುವುದು ಅತ್ಯಗತ್ಯವಾಗಿದೆ.

ಅಮೃತಸರದಲ್ಲಿ ರವಿವಾರ ಕೊನೆಗೊಂಡ ಹಾರ್ಟ್ ಆಫ್ ಏಷ್ಯ ಸಮ್ಮೇಳನದಲ್ಲಂತೂ ಸುಷ್ಮಾ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ  ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿದ್ದ ಸುಷ್ಮಾ ವಿದೇಶಗಳಲ್ಲಿ ತೊಂದರೆಯಲ್ಲಿ ಸಿಲುಕಿದ್ದ ಹಲವು ಭಾರತೀಯರಿಗೆ ಆಪತ್ಭಾಂಧವರಾಗಿ  ಅಪಾರ ಜನಾನುರಾಗಿ ಮನ್ನಣೆ ಗಳಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News