ಅಮ್ಮನ ಆರೋಗ್ಯ ಸ್ಥಿರ; ವೈದ್ಯರಿಂದ ತೀವ್ರ ನಿಗಾ
ಚೆನ್ನೈ, ಡಿ.5: ತೀವ್ರ ಹೃದಯಾಘಾತಕ್ಕೊಳಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯ ಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರು ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.
ಅಪೋಲೋ ಆಸ್ಪತ್ರೆಯಲ್ಲಿ ಎಕ್ಮೊ(ಇಸಿಎಂಒ)ದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತಜ್ಞ ವೈದ್ಯರು ನೀಡಿದ ಚಿಕಿತ್ಸೆ ಫಲವಾಗಿ ಜಯಲಲಿತಾ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ ಎಂದು ವರಿ ತಿಳಿಸಿದೆ.
ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಲು ಹೊಸದಿಲ್ಲಿಯ ಏಮ್ಸ್ ನ ಐವರು ತಜ್ಞರ ವೈದ್ಯರ ತಂಡ ಆಗಮಿಸುತ್ತಿದ್ದು, ಪ್ರತಿಕೂಲ ವಾತಾವರಣದಿಂದಾಗಿ ವಿಮಾನ ಹಾರಾಟ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಅವರು ಇನ್ನೂ ತಲುಪಿಲ್ಲ. ಈ ನಡುವೆ ಲಂಡನ್ ವೈದ್ಯರಾದ ಡಾ.ರಿಚರ್ಡ್ ಬಿಲೆ ಅವರನ್ನು ಸಂಪರ್ಕಿಸಿದ ಅಪೋಲೋ ಆಸ್ಪತ್ರೆಯ ವೈದ್ಯರು ಸೂಕ್ತ ಸಲಹೆ ಪಡೆದಿದ್ದಾರೆ. ಇಂದು ಸಂಜೆ 5 ಗಂಟೆಗೆ ಅಪೋಲೋ ಆಸ್ಪತ್ರೆಯ ವೈದ್ಯರು ಜಯಲಲಿತಾ ಆರೋಗ್ಯದ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ.