ಸೈಯದ್ ಕುಟುಂಬ ನೀಡಿರುವ ವಿಳಾಸದಲ್ಲಿ ಕಳೆದ ಏಳು ವರ್ಷಗಳಿಂದ ಯಾರೂ ವಾಸವಾಗಿಯೇ ಇಲ್ಲ!

Update: 2016-12-05 09:08 GMT

ಮುಂಬೈ,ಡಿ.5: ಇಲ್ಲಿಯ ಬಾಂದ್ರಾದ ಸೈಯದ್ ಕುಟುಂಬವು ಆದಾಯ ಬಹಿರಂಗ ಯೋಜನೆಯಡಿ ಎರಡು ಲಕ್ಷ ಕೋಟಿ ರೂ.ಗಳ ಬೃಹತ್ ಮೊತ್ತದ ಕಪ್ಪುಹಣವನ್ನು ಘೋಷಿಸಿದೆ ಎಂದು ವಿತ್ತ ಸಚಿವಾಲಯವು ಬಹಿರಂಗಗೊಳಿಸುವುದೊಡನೆ ಈ ಕುಟುಂಬವು ನಿನ್ನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಚೋದ್ಯವೆಂದರೆ ಸಚಿವಾಲಯವು ತನ್ನ ಹೇಳಿಕೆಯಲ್ಲಿ ನೀಡಿರುವ ವಿಳಾಸದಲ್ಲಿ ಸೈಯದ್ ಹೆಸರಿನ ಕುಟುಂಬವೇ ಇಲ್ಲ. ಕಳೆದ ಏಳು ವರ್ಷಗಳಿಂದಲೂ ಈ ಫ್ಲಾಟ್ ಖಾಲಿ ಬಿದ್ದುಕೊಂಡಿದ್ದು, ನೆರೆಹೊರೆಯ ಯಾರೂ ಸೈಯದ್ ಕುಟುಂಬದ ಹೆಸರನ್ನೇ ಕೇಳಿಲ್ಲ. ಇದು ‘ಮುಂಬೈ ಮಿರರ್’ ಪತ್ರಿಕೆಯ ವರದಿಗಾರರು ರಿಯಾಲಿಟಿ ಚೆಕ್‌ಗೆಂದು ಸೈಯದ್ ಕುಟುಂಬದ ವಿಳಾಸವನ್ನು ಹಿಡಿದುಕೊಂಡು ಬಾಂದ್ರಾದ ಜ್ಯುಬಿಲಿ ಕೋರ್ಟ್‌ಗೆ ಭೇಟಿ ನೀಡಿದಾಗ ಬಯಲಾಗಿರುವ ವಾಸ್ತವ.
ಸಚಿವಾಲಯವು ನೀಡಿದ್ದ ಹೇಳಿಕೆಯಂತೆ ಫ್ಲಾಟ್ ನಂ.4, ನೆಲ ಅಂತಸ್ತು, ಜ್ಯುಬಿಲಿ ಕೋರ್ಟ್, 269-ಬಿ, ಟಿಪಿಎಸ್-3, ಲಿಂಕಿಂಗ್ ರೋಡ್, ಬಾಂದ್ರಾ(ಪಶ್ಚಿಮ) ಈ ವಿಳಾಸದಲ್ಲಿ ವಾಸವಿರುವ ಅಬ್ದುಲ್ ರಝಾಕ್ ಮೊಹಮ್ಮದ್ ಸೈಯದ್, ಆತನ ಪುತ್ರ ಆರಿಫ್, ಪತ್ನಿ ರುಕ್ಸಾನಾ ಮತ್ತು ಸೋದರಿ ನೂರ್‌ಜಹಾನ್ ಹೆಸರಿನ ನಾಲ್ವರನ್ನೊಳಗೊಂಡ ಕುಟುಂಬವು ಎರಡು ಲಕ್ಷ ಕೋಟಿ ರೂ.ಗಳ ಕಪ್ಪುಹಣವನ್ನು ಘೋಷಿಸಿತ್ತು.
ಸದ್ರಿ ಫ್ಲಾಟ್ ಕಂಪನಿಯೊಂದರ ಹೆಸರಿನಲ್ಲಿದೆ. ಕಳೆದ ಏಳು ವರ್ಷಗಳಿಂದ ಅಲ್ಲಿ ಯಾರೂ ವಾಸವಾಗಿಲ್ಲ. ಪ್ರತಿ ಆರು ತಿಂಗಳಿಗೊಮ್ಮೆ ಯಾರೋ ಬಂದು ನಿರ್ವಹಣಾ ಶುಲ್ಕವನ್ನು ನೀಡುತ್ತಾರೆ ಎಂದು ಜ್ಯುಬಿಲಿ ಕೋರ್ಟ್ ಕಟ್ಟಡದ ಕಾರ್ಯದರ್ಶಿ ತಿಳಿಸಿದ್ದಾರೆ.
 ಕಟ್ಟಡದಲ್ಲಿರುವ ನಾಮಫಲಕವು ಸೂಚಿಸುವಂತೆ ಈ ಫ್ಲಾಟ್ ಆರ್.ಆರ್.ವೈದ್ ಎನ್ನುವವರ ಹೆಸರಿನಲ್ಲಿದೆ. ಸೊಸೈಟಿಯ ಸದಸ್ಯರು ಹೇಳುವಂತೆ ಈ ವೈದ್ ಮಹಾಶಯ ಫ್ಲಾಟ್‌ನ ಹಿಂದಿನ ಮಾಲಕರಾಗಿದ್ದಾರೆ. ಎಂಟು ದಿನಗಳ ಹಿಂದೆ ಇಬ್ಬರು ಅಧಿಕಾರಿಗಳು ತನ್ನನ್ನು ಭೇಟಿಯಾಗಿ ಜ್ಯುಬಿಲಿ ಕೋರ್ಟ್ ಬಗ್ಗೆ ವಿಚಾರಿಸಿದ್ದರು ಎಂದು ಸಮೀಪದ ಶೋ ರೂಮ್‌ವೊಂದರ ವಾಚ್‌ಮನ್ ತಿಳಿಸಿದ್ದಾನೆ.
 ಸೈಯದ್ ಕುಟುಂಬದ ವಿರುದ್ಧ ಇಲಾಖೆಯು ತನಿಖೆಯನ್ನು ಆರಂಭಿಸಿದೆಯಾದರೂ ಈವರೆಗೆ ಕುಟುಂಬದ ಯಾರನ್ನೂ ಪ್ರಶ್ನಿಸಿಲ್ಲ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.
 ನಿಗದಿತ ನಮೂನೆಯಲ್ಲಿ ಅಬ್ದುಲ್‌ನ ಪಾನ್ ಸಂಖ್ಯೆಯನ್ನು ಸಲ್ಲಿಸಲಾಗಿದೆ ಮತ್ತು ಆತನ ಹಿಂದಿನ ಮೂರು ವರ್ಷಗಳ ಆದಾಯತೆರಿಗೆ ರಿಟರ್ನ್‌ಗಳನ್ನು ಪರಿಶೀಲಿಸಲಾಗಿದೆ ಎಂದು ಮೂಲಗಳು ಮುಂಬೈ ಮಿರರ್ ವರದಿಗಾರರಿಗೆ ತಿಳಿಸಿವೆ. ಇಲಾಖೆಯು ಮತ್ತೊಮ್ಮೆ ಈ ದಾಖಲೆಗಳನ್ನು ಪರಿಶೀಲಿಸಿ ವಿಚಾರಣೆಗಾಗಿ ಕುಟುಂಬದ ಸದಸ್ಯರಿಗೆ ಸಮನ್ಸ್ ಕಳುಹಿಸಲಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.
ಸೈಯದ್ ಕುಟುಂಬದ ನಾಲ್ಕು ಪಾನ್ ಸಂಖ್ಯೆಗಳ ಪೈಕಿ ಮೂರನ್ನು ಅಜ್ಮೇರ್‌ನಿಂದ ನೀಡಲಾಗಿದ್ದು, ಈ ಕುಟುಂಬವು ಸೆ.16ರಂದು ಮುಂಬೈಗೆ ವಲಸೆ ಬಂದಿದೆ. ಕಪ್ಪುಹಣ ಘೋಷಣೆಯನ್ನು ಮುಂಬೈನಲ್ಲಿಯೇ ಸಲ್ಲಿಸಲಾಗಿದೆ ಎಂದು ವಿತ್ತ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News