ಮೂಲ ಗೇಣಿದಾರರಿಗೆ ಮಾಲಕತ್ವ ಪ್ರದಾನಕ್ಕೆ ಶೀಘ್ರ ಅರ್ಜಿ ಸ್ವೀಕಾರ : ಐವನ್ ಡಿ ಸೋಜ

Update: 2016-12-05 11:39 GMT

ಮಂಗಳೂರು ,ಡಿ.5 : ಕರ್ನಾಟಕ ಮೂಲ ಗೇಣಿ ಅಥವಾ ಒಳ ಮೂಲಗೇಣಿದಾರರಿಗೆ ಮಾಲಿಕತ್ವ ಪ್ರದಾನ ಮಾಡುವ ಅಧಿನಿಯಮಕ್ಕೆ ಸಂಬಂಧಿಸಿದಂತೆ ಅರ್ಜಿ ಸ್ವೀಕರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಕಂದಾಯ ಸಚಿವರು ಸೂಚಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಅರ್ಜಿ ಸ್ವೀಕಾರ ಪ್ರಕ್ರೀಯೆ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ ಸೋಜ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕರ್ನಾಟಕ ಮೂಲ ಗೇಣಿ ಅಥವಾ ಒಳ ಮೂಲ ಗೇಣಿದಾರರಿಗೆ ಮಾಲಿಕತ್ವ ಪ್ರಧಾನ ಮಾಡುವ ಅಧಿನಿಯಮ 2011ಕ್ಕೆ ಜು.13,2012ರಲ್ಲಿ ರಾಷ್ಟ್ರಪತಿಯವರು ಅನುಮೋದನೆ ನೀಡಿದ್ದು ಡಿ. 20, 2012ರಂದು ಜಾರಿಗೆ ತರಲಾಗಿದೆ. ಕರ್ನಾಟಕದ 2012ರ ಅಧಿನಿಯಮಕ್ಕೆ ನಿಯಮ ರೂಪಿಸಿ ನ.7,2016ರ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಈ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಶೀಘ್ರದಲ್ಲಿಯೇ ತಹಶೀಲ್ದಾರರು ಅರ್ಜಿ ಸ್ವೀಕರಿಸಲು ಉಡುಪಿ,ಮಂಗಳೂರು ತಹಶೀಲ್ದಾರರಿಗೆ ಕಂದಾಯ ಸಚಿವರು ಸೂಚನೆ ನೀಡಿದ್ದಾರೆ.ಇದರಿಂದ ಮಂಗಳೂರು ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ನೆರವಾಗಲಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.

 ಕಂಬಳ- ಜಲ್ಲಿಕಟ್ಟು ಪ್ರತ್ಯೇಕ :

ಕಂಬಳ ಮತ್ತು ಜಲ್ಲಿ ಕಟ್ಟು ಒಂದೆ ಅಲ್ಲ ಎನ್ನುವುದನ್ನು ಈ ಬಗ್ಗೆ ಅಧ್ಯಯನ ನಡೆಸಿದ ಸಮಿತಿಯೂ ವರದಿ ನೀಡಿದೆ. ಕಂಬಳದಲ್ಲಿ ಹಿಂಸೆಗೆ ಅವಕಾಶ ನೀಡದಂತೆ ನಡೆಸಲು ಸರಕಾರ ಕಳೆದ ವರ್ಷವೂ ಸಮ್ಮತಿ ನೀಡಿತ್ತು.  ಈ ಬಾರಿ ಈ ಪ್ರಕರಣ ನ್ಯಾಯಾಲಯದಲ್ಲಿದ್ದರೂ ವಾಸ್ತವ ಸ್ಥಿತಿಯನ್ನು ನ್ಯಾಯಾಲಯ ಗಮನಿಸಿ ಪ್ರಸಕ್ತ ಕಂಬಳಗಳು ಆರಂಭವಾಗುವ ಮೊದಲು ಹಿಂಸಾರಹಿತವಾಗಿ ಕಂಬಳ ನಡೆಸಲು ಅವಕಾಶ ಕಲ್ಪಿಸಬಹುದು ಎಂಬ ಆಶಾ ಭಾವನೆ ಹೊಂದಿರುವುದಾಗಿ ಮುಖ್ಯ ಸಚೇತಕ ಐವನ್ ಡಿ ಸೋಜ ತಿಳಿಸಿದ್ದಾರೆ.

  ಪರಿಣಾಮಕಾರಿ ಸದನ ಸಭೆ ನಡೆಸಲು ಜಂಟಿ ನಿಯಮಾವಳಿ:

ಸದನದಲ್ಲಿ ಪರಿಣಾಮಕಾರಿಯಾಗಿ ಚರ್ಚೆ ನಡೆಯಲು ಅನುಕೂಲವಾಗುವಂತೆ ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನ ಪ್ರಥಮ 4 ಗಂಟೆಗಳಲ್ಲಿ ನಡೆಯುವ ಕಲಾಪಗಳಿಗೆ ಸಂಬಂಧಿಸಿದಂತೆ ಜಂಟಿ ನಿಯಮಾವಳಿ ರೂಪಿಸಲು ಚಿಂತನೆ ನಡೆದಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.

ಈ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನ ಕಳೆದ ವರ್ಷಕ್ಕೆ ಹೋಲಿಸಿದಾಗ ಹೆಚ್ಚು ಗಂಟೆಗಳ ಕಾಲ ಚರ್ಚೆ ನಡೆದಿದೆ.ಇದರಿಂದ ಹೆಚ್ಚು ವಿಷಯಗಳು ಚರ್ಚೆ ಮಾಡಲು ಮತ್ತು ಹೆಚ್ಚು ವಿಧೇಯಕಗಳನ್ನು ಮಂಡಿಸಲು ಸಾಧ್ಯವಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News