ಸಚಿವ ಯು.ಟಿ.ಖಾದರ್‌ರಿಂದ ಅಹವಾಲು ಸ್ವೀಕಾರ
ಉಳ್ಳಾಲ, ಡಿ.5 : ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ನಡೆಯಬೇಕಿರುವ ವಿವಿಧ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದ ಸಚಿವ ಯು.ಟಿ.ಖಾದರ್ ಅವರು ಬಳಿಕ ನಗರಸಭಾ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅಹವಾಲು ಸ್ವೀಕರಿಸಿದರು.
ಬಳಿಕ ಮಾತನಾಡಿದ ಸಚಿವರು, ಉಳ್ಳಾಲ ಪುರಸಭೆಯಿಂದ ನಗರಸಭೆಯಾಗಿ ವರ್ಷವೂ ಆಗಿಲ್ಲ, ಪರಸಭಾ ಸದಸ್ಯರು ನಗರಸಭೆಗೆ ಮುಂಭಡ್ತಿ ಹೊಂದಿದ್ದಾರೆ. ಹೀಗಿರುವಾಗ ಆರಂಭದಲ್ಲಿ ಸಮಸ್ಯೆಗಳಿದ್ದರೂ ಕ್ರಮೇಣ ಬಗೆಹರಿಯಲಿದೆ. ನಗರೋತ್ಥಾನ ವಿಶೇಷ ಯೋಜನೆಯಲ್ಲಿ 25 ಕೋಟಿ ಅನುದಾನ ನಗರಸಭೆಗೆ ಬಿಡುಗಡೆಗೊಳಿಸಲಾಗಿದ್ದು, 5.50 ಕೋಟಿ ಬಂದಿದೆ. ಈ ಬಾರಿ ಕಳೆದ ವರ್ಷದಂತೆ ಅನುದಾನ ಬಾಕಿಯಾಗದೆ ಶೀಘ್ರ ಕಾಮಗಾರಿ ನಡೆಯಲಿದೆ ಎಂದರು.
ಕೆಲವು ವಾರ್ಡ್‌ಗಳಲ್ಲಿ ಜನರು ಹಾಗೂ ಕೌನ್ಸಿಲರ್‌ಗಳ ಬೇಡಿಕೆಗೆ ಅನುಗುಣವಾಗಿ ಕೋಟಿಗೂ ಅಧಿಕ ಮೊತ್ತದಲ್ಲಿ ಹೆಚ್ಚುವರಿ ಕೆಲಸ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ವಾಣಿ ವಿ.ಆಳ್ವ ತಿಳಿಸಿದರು. ಈ ಸಂದರ್ಭ ಸಚಿವರು, ಜನರು ಹಾಗೂ ಜನಪ್ರತಿನಿಧಿಗಳು ಬೇಡಿಕೆ ಇಡುತ್ತಾರೆಂದ ಮಾತ್ರಕ್ಕೆ ಅವರು ಹೇಳಿದ ಕೆಲಸ ಮಾಡಬೇಕಾಗಿಲ್ಲ, ಅನುದಾನ ಇದ್ದಷ್ಟು ಕೆಲಸ ನಿರ್ವಹಿಸಿ ಎಂದು ಹೇಳಿದರು.
ನಗರಸಭೆ ಬೆಳೆದಂತೆ ಸಂಪನ್ಮೂಲ ಹೆಚ್ಚಿಸುವ ಜವಾಬ್ದಾರಿ ಅಧಿಕಾರಿ ವರ್ಗದ ಮೇಲಿದೆ, ಈಗಾಗಲೇ 25 ಕೋಟಿ ವಿಶೇಷ ಅನುದಾನ ಬಿಡುಗಡೆಗೊಂಡಿದ್ದು, ಯಾವೆಲ್ಲಾ ಕೆಲಸಕ್ಕೆ ಬಳಕೆ ಮಾಡಬೇಕು ಎನ್ನುವ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಕೌನ್ಸಿಲರ್‌ಗಳಿಗಿದೆ, ಅನುದಾನಕ್ಕಾಗಿ ಜಿಲ್ಲಾಡಳಿತವನ್ನು ಕಾಯಬೇಡಿ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ಒಳಚರಂಡಿ ಯೋಜನೆಗೆ 65 ಕೋಟಿಯಷ್ಟು ಖರ್ಚಾದರೂ ಯೋಜನೆ ಸಮರ್ಪಕವಾಗಿಲ್ಲ, ಕುಡಿಯುವ ನೀರಿಗೆ 20 ಕೋಟಿಯಷ್ಟು ಖರ್ಚಾದರೂ ಸಮಸ್ಯೆ ತಪ್ಪಿಲ್ಲ, ಕಸ ವಿಲೇವಾರಿ ಹೀಗೆ ಮೂರು ಸಮಸ್ಯೆಗಳಿಗೆ ಪರಿಹಾರ ಸಿಕ್ಕರೆ ಉಳ್ಳಾಲದ ಶೇ.50 ಸಮಸ್ಯೆ ಪರಿಹಾರಗೊಳ್ಳುತ್ತದೆ, ತೊಕ್ಕೊಟ್ಟಿನಲ್ಲಿ ರೈಲ್ವೇ ಕ್ರಾಸಿಂಗ್‌ಗೆ ಅನುದಾನ ಮೀಸಲಿಡಿ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್ ಮನವಿ ಮಾಡಿದರು.
ಉಳ್ಳಾಲಕ್ಕೆ ಒಳಚರಂಡಿ, ಕುಡಿಯುವ ನೀರಿನ ಯೋಜನೆ ಬಂದರೂ ನೆಪಮಾತ್ರಕ್ಕೆ ಎನಿಸಿದೆ. ಕಸ ವಿಲೇವಾರಿ ಗುತ್ತಿಗೆದಾರರಿಗೆ ಸೂಕ್ತ ಸಮಯದಲ್ಲಿ ಹಣ ದೊರೆತರೆ ಈಗಿನ ಗುತ್ತಿಗೆದಾರರ ದುಬಾರಿ ಬೇಡಿಕೆಗೆ ಕಡಿವಾಣ ಹಾಕಬಹುದು, ಮನೆ ಮನೆ ಕಸ ಸಂಗ್ರಹಿಸುವವರೇ ಶುಲ್ಕ ಸಂಗ್ರಹಿಸಿದರೆ ಉತ್ತಮ ಎನ್ನುವುದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅವರು ಆಗ್ರಹ.
ನಗರಸಭಾ ವ್ಯಾಪ್ತಿಯ ಪೆರ್ಮನ್ನೂರಿನಲ್ಲಿ 9 ಎಕರೆ ಸರ್ಕಾರಿ ಜಮೀನು ಇದ್ದು, ಅದರಲ್ಲಿ ನಿವೇಶನ, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಬಹುದು ಎಂದು ಹೇಳಿದ ಮಾಜಿ ಕೌನ್ಸಿಲರ್ ಉಸ್ಮಾನ್ ಕಲ್ಲಾಪು ದಾಖಲೆಗಳನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.
ದರ್ಗಾ ಸದಸ್ಯ ಎ.ಕೆ.ಮೊಯಿದ್ದೀನ್, ಕೌನ್ಸಿಲರ್‌ಗಳಾದ ಫಾರೂಕ್ ಉಳ್ಳಾಲ್, ಮುಸ್ತಫಾ ಅಬ್ದುಲ್ಲಾ, ಯು.ಎ.ಇಸ್ಮಾಯಿಲ್, ಮಹಮ್ಮದ್ ಮುಕಚ್ಚೇರಿ,ಮೊದಲಾದವರು ಮಾತನಾಡಿದರು.
ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು, ಉಪಾಧ್ಯಕ್ಷೆ ಚಿತ್ರಾ, ನಗರಸಭೆಯ ಇಂಜಿನಿಯರ್ ದಿವಾಕರ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.