ಬಾಬರಿ ಮಸೀದಿ ಪುನರ್ ನಿರ್ಮಾಣಕ್ಕೆ ಇಮಾಮ್ಸ್ ಕೌನ್ಸಿಲ್ ಆಗ್ರಹ
ಮಂಗಳೂರು, ಡಿ.5: ಬಾಬರಿ ಮಸೀದಿ ಧ್ವಂಸ ಪ್ರಕರಣವು ದೇಶದ ಇತಿಹಾಸದಲ್ಲೇ ಕಪ್ಪುಚುಕ್ಕೆ ಎಂಬಂತಿದೆ. ಇದನ್ನು ಪುನ: ಅದೇ ಸ್ಥಳದಲ್ಲಿ ನಿರ್ಮಿಸಬೇಕು ಮತ್ತು ಧ್ವಂಸಗೈದ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಹಾಗೂ ಲಿಬರ್ಹಾನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ದ.ಕ.ಜಿಲ್ಲಾ ಸಮಿತಿ ಆಗ್ರಹಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಜಿಲ್ಲಾಧ್ಯಕ್ಷ ವೌಲಾನಾ ಜಾಫರ್ ಸಾದಿಕ್ ಫೈಝಿ,ಇದು ಕೇವಲ ಮಸೀದಿ ಧ್ವಂಸ ಪ್ರಕರಣವಲ್ಲ. ದೇಶದ ಪ್ರಜಾಪ್ರಭುತ್ವ ಮತ್ತು ಜಾತ್ಯತೀಯ ವೌಲ್ಯಗಳ ನಾಶವೂ ಆಗಿದೆ. ಸಂವಿಧಾನ ವಿರೋಧಿಯಾಗಿರುವ ಈ ಕೃತ್ಯದಿಂದ ಭಾರತ ಜಗತ್ತಿನ ಮುಂದೆ ತಲೆತಗ್ಗಿಸುವಂತಾಗಿದೆ. ಹಾಡುಹಗಲೇ ನಡೆದ ಈ ಕೃತ್ಯದ ಸಂದರ್ಭ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಸರಕಾರವು , ಮಸೀದಿಯನ್ನು ಅದೇ ಸ್ಥಳದಲ್ಲಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿತ್ತು. ಆದರೆ, ಕಾಂಗ್ರೆಸ್ ಆ ಭರವಸೆಯನ್ನು ಈಡೇರಿಸಿಲ್ಲ ಎಂದು ಹೇಳಿದರು.
ಮಸೀದಿಯನ್ನು ಧ್ವಂಸಗೈದ ಆರೋಪಿಗಳು ಆ ಬಳಿಕ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ದೇಶದ ಪ್ರಜಾಸತ್ತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ನ್ಯಾಯಾಲಯದಲ್ಲಿ ಇಂದಿಗೂ ಬಾಬರಿ ಮಸೀದಿ ಪ್ರಕರಣ ತೀರ್ಮಾನವಿಲ್ಲದೆ ಕೊಳೆಯುತ್ತಿರುವುದು ಅಕ್ಷಮ್ಯ ಎಂದಿರುವ ಫೈಝಿ, ಬಾಬರಿ ಮಸೀದಿಯನ್ನು ಅದೇ ಸ್ಥಳದಲ್ಲಿ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೌಲಾನಾ ಅಬ್ದುಲ್ಲಾ ಮುಸ್ಲಿಯಾರ್, ಅಬ್ಬಾಸ್ ಮುಸ್ಲಿಯಾರ್ ಉಪಸ್ಥಿತರಿದ್ದರು.