×
Ad

ಶಿಕ್ಷಕರ ಸಂಬಳ ಸಮಸ್ಯೆಯತ್ತ ಗಮನ ಹರಿಸಿ: ಆರ್‌ಬಿಐಗೆ ಹೈಕೋರ್ಟ್ ಸೂಚನೆ

Update: 2016-12-05 21:16 IST

ಮುಂಬೈ, ಡಿ.5: ಅನುದಾನಿತ ಶಾಲಾ ಶಿಕ್ಷಕರ ಸಂಬಳ ಸಮಸ್ಯೆಯ ಬಗ್ಗೆ ತಕ್ಷಣ ಗಮನ ಹರಿಸುವಂತೆ ಬಾಂಬೆ ಹೈಕೋರ್ಟ್ ರಿಸರ್ವ್ ಬ್ಯಾಂಕ್‌ಗೆ ಸೂಚಿಸಿದೆ. ಶಾಲಾ ಶಿಕ್ಷಕರ ಸಂಬಳ ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಮೂಲಕ ಪಾವತಿಯಾಗುತ್ತಿತ್ತು. ಆದರೆ ನೋಟು ಅಮಾನ್ಯದ ಬಳಿಕ ಜಿಲ್ಲಾ ಸಹಕಾರ ಬ್ಯಾಂಕ್‌ಗಳಲ್ಲಿ ಹಳೆಯ ನೋಟುಗಳನ್ನು ಠೇವಣಿ ಇಡುವುದು ಅಥವಾ ಬದಲಾಯಿಸುವುದನ್ನು ನಿಬರ್ಂಧಿಸಿ ರಿಸರ್ವ್ ಬ್ಯಾಂಕ್ ಸುತ್ತೋಲೆ ಹೊರಡಿಸಿತ್ತು. ಇದರಿಂದ ಶಿಕ್ಷಕರಿಗೆ ಸಂಬಳ ಪೂರೈಸಲು ಅಸಾಧ್ಯವಾಗಿತ್ತು.

 ರಿಸರ್ವ್ ಬ್ಯಾಂಕ್‌ನ ಈ ಸುತ್ತೋಲೆಯನ್ನು ಪ್ರಶ್ನಿಸಿ ಮುಂಬೈ, ಸೋಲಾಪುರ, ನಾಶಿಕ್ ಮತ್ತು ಪುಣೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಸೋಲಾಪುರ ಸಹಕಾರ ಬ್ಯಾಂಕ್ ಪ್ರತೀ ತಿಂಗಳು ಸರಕಾರದಿಂದ ಸುಮಾರು 95 ಕೋಟಿ ರೂ.ಗಳಷ್ಟು ಹಣ ಪಡೆದು ಶಿಕ್ಷಕರ ಸಂಬಳ ಪಾವತಿಸುತ್ತಿತ್ತು. ಆದರೆ ನ.14ರಂದು ರಿಸರ್ವ್ ಬ್ಯಾಂಕ್ ಹೊರಡಿಸಿದ್ದ ಸುತ್ತೋಲೆಯ ಕಾರಣ ಶಿಕ್ಷಕರ ಸಂಬಳ ಪಾವತಿಸಲು ಬ್ಯಾಂಕ್‌ಗೆ ಸಾಧ್ಯವಾಗುತ್ತಿಲ್ಲ ಎಂದು ಬ್ಯಾಂಕ್‌ನ ವಕೀಲ ವಿ.ಎಂ.ಥೋರಟ್ ಕೋರ್ಟ್‌ಗೆ ತಿಳಿಸಿದರು.

  ವಿಷಯದ ಬಗ್ಗೆ ತಕ್ಷಣ ಗಮನ ಹರಿಸುವಂತೆ ನ್ಯಾಯಾಧೀಶರಾದ ಎ.ಎಸ್.ಓಕ ಮತ್ತು ಅನುಜ ಪ್ರಭು ದೇಸಾಯಿ ಅವರನ್ನೊಳಗೊಂಡ ವಿಭಾಗೀಯ ಪೀಠ ರಿಸರ್ವ್ ಬ್ಯಾಂಕ್‌ಗೆ ಸೂಚಿಸಿತು. ಅನುದಾನಿತ ಶಾಲಾ ಶಿಕ್ಷಕರಿಗೆ ಸಹಕಾರ ಬ್ಯಾಂಕ್‌ಗಳ ಮೂಲಕ ಸಂಬಳ ದೊರೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ಈಗ ಈ ಶಿಕ್ಷಕರಿಗೆ ಹೇಗೆ ಸಂಬಳ ಪಾವತಿಯಾಗುತ್ತಿದೆ ಎಂಬ ಬಗ್ಗೆ ತಿಳಿಯಬೇಕಿದೆ ಎಂದು ವಿಭಾಗೀಯ ಪೀಠ ತಿಳಿಸಿ ಮುಂದಿನ ವಿಚಾರಣೆಯನ್ನು ಡಿ.14ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News