ಡಿ.10ರಿಂದ ಜಿಲ್ಲೆಯಲ್ಲಿ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ

Update: 2016-12-05 18:22 GMT

ಮಂಗಳೂರು, ಡಿ.5: ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಉಳಿಸಲು ಮತ್ತು ಎತ್ತಿನಹೊಳೆ ಯೋಜನೆ ವಿರೋಧಿಸಿ ಡಿ.10ರಿಂದ 12ರವರೆಗೆ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ ನಡೆಯಲಿದೆ ಎಂದು ಎತ್ತಿನಯೊಳೆ ಸಂಯುಕ್ತ ಹೋರಾಟ ಸಮಿತಿಯ ಗೌರವಾಧ್ಯಕ್ಷ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ನದಿಯ ನೀರನ್ನು ಕಳಶಕ್ಕೆ ತುಂಬುವ ಮೂಲಕ ಚಾಲನೆಗೊಳ್ಳುವ ಈ ರಥಯಾತ್ರೆ ಸಪ್ತಕ್ಷೇತ್ರಗಳಾದ ಧರ್ಮಸ್ಥಳ ಕ್ಷೇತ್ರ, ಉಪ್ಪಿನಂಗಡಿ, ಪೊಳಲಿ, ಕದ್ರಿ, ಬಪ್ಪನಾಡು, ಕಟೀಲು ಮೂಲಕ ಸಾಗಲಿದೆ. ಈ ಹಾದಿಯಲ್ಲಿ ಸಾಗುವಾಗ ನೇತ್ರಾವತಿ, ಫಲ್ಗುಣಿ, ಶಾಂಭವಿ ನದಿ ನೀರಿನ ಜೊತೆಗೆ ನಂದಿನಿ ನದಿಯ ಕಳಶಕ್ಕೆ ತುಂಬುವ ಮೂಲಕ ಸಮಾಪ್ತಿಗೊಳಲಿದೆ. ಹೋರಾಟಗಾರ ಕಿಶೋರ್ ಸಕಲೇಶಪುರ ಎತ್ತಿನಹೊಳೆಯ ನೀರನ್ನೂ ಕಳಶಕ್ಕೆ ತುಂಬಿಸಲಿದ್ದು, ಹಾದಿಯಲ್ಲಿ ಸಿಗುವ ಮಸೀದಿ ಹಾಗೂ ಚರ್ಚ್‌ಗಳ ಧರ್ಮಗುರುಗಳು ಮೆರವಣಿಗೆಯನ್ನು ಸ್ವಾಗತಿಸಲಿದ್ದಾರೆ. ಜಿಲ್ಲೆಯನ್ನು ಉಳಿಸುವ ನಿಟ್ಟಿನಲ್ಲಿ ಪಕ್ಷಾತೀತ, ಧರ್ಮಾತೀತ ಹೋರಾಟ ಇದಾಗಲಿದೆ ಎಂದು ವಿಜಯ ಕುಮಾರ್ ಶೆಟ್ಟಿ ನುಡಿದರು.

ನೇತ್ರಾವತಿ ನದಿ ನೀರನ್ನು ತಿರುಗಿಸಲು ಹೊರಡುವವರಿಗೆ ಜ.26ರವರೆಗೆ ಗಡುವು ನೀಡಲಾಗುವುದು. ಬಳಿಕ ಅವರ ಅಸ್ತಿತ್ವವನ್ನೇ ತಿರುಗಿಸುತ್ತೇವೆ. ಜಿಲ್ಲೆಯ ಜನತೆಯ ತಾಳ್ಮೆಗೂ ಮಿತಿಯಿದೆ. ಯಾವುದೇ ಹೋರಾಟಕ್ಕೂ ಸಿದ್ಧ. ಇದರ ಪರಿಣಾಮಕ್ಕೆ ಸರಕಾರವೇ ಹೊಣೆ ಎಂದು ವಿಜಯ ಕುಮಾರ್ ಶೆಟ್ಟಿ ಎಚ್ಚರಿಸಿದರು. ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಆರಂಭದಿಂದಲೇ ಹೋರಾಟಕ್ಕಿಳಿದಿದ್ದರು. ಸರಕಾರವನ್ನೂ ಎಚ್ಚರಿಸಿದ್ದರು.

 ಇದೀಗ ಈ ರಥಯಾತ್ರೆಗೆ ಪೂಜಾರಿಯವರನ್ನು ಸಂಸದ ನಳಿನ್ ಕುಮಾರ್ ಕಟೀಲು ಬರಮಾಡಿಕೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಜಿಲ್ಲೆಯ ಉಳಿವಿಗಾಗಿ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ಸರಕಾರಕ್ಕೆ ಸಲ್ಲಿಸಿದ್ದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಯೋಜನೆಯನ್ನು ಕೈ ಬಿಡುತ್ತಿದ್ದರು. ಆದರೆ ರಾಜಕೀಯ ಇಚ್ಛಾಶಕ್ತಿಗೆ ಮಣಿದು ಅವರು ಜಿಲ್ಲೆಯನ್ನೇ ಬಲಿಕೊಡುತ್ತಿದ್ದಾರೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ಮೋನಪ್ಪ ಭಂಡಾರಿ, ಪುರುಷೋತ್ತಮ ಚಿತ್ರಾಪುರ, ಎಂ.ಜಿ.ಹೆಗಡೆ, ದಿನಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News