ಪ್ರಧಾನಿ ಹೇಳಿದ ಹಾಗೆ ಮಾಡಿದರೆ ನಮಗೆ, ಕುಟುಂಬಕ್ಕೆ ಅಪಾಯ: ಗ್ರಾಮಸ್ಥರು

Update: 2016-12-06 03:24 GMT

ಬರೇಲಿ, ಡಿ.6: ಜನಧನ್ ಖಾತೆದಾರರು ತಮ್ಮ ಖಾತೆಗೆ ಕಾಳಧನಿಕರು ಹಾಕಿದ ಹಣವನ್ನು ವಾಪಸ್ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ರ್ಯಾಲಿಯಲ್ಲಿ ಘೋಷಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಜತೆ ಸಂವಾದ ನಡೆಸಿದಾಗ, "ಪ್ರಧಾನಿ ಸಲಹೆಯನ್ನು ವಾಸ್ತವವಾಗಿ ಪಾಲಿಸಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ಹೇಳಿಕೆಯ ಎರಡು ದಿನಗಳ ಬಳಿಕ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಗ್ರಾಮಸ್ಥರ ಅಭಿಪ್ರಾಯ ಕೇಳಿದಾಗ, "ಪ್ರಧಾನಿ ಹೇಳಿಕೆ ಸರಿ ಇರಬಹುದು. ಆದರೆ ವಾಸ್ತವ ಎಂದರೆ ತಮ್ಮ ಖಾತೆಯಲ್ಲಿ ಕಾಳಧನಿಕರು ಹಣ ಜಮೆ ಮಾಡಲು ಅವಕಾಶ ನೀಡಿರುವ ಜನಧನ್ ಖಾತೆದಾರ ಅದನ್ನು ಉಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇದರಿಂದ ನಮ್ಮ ಜೀವ ಹಾಗೂ ಕುಟುಂಬಕ್ಕೇ ಅಪಾಯ ಎದುರಾಗಬಹುದು" ಎಂಬ ಆತಂಕ ವ್ಯಕ್ತಪಡಿಸಿದರು.
ಟ್ರಕ್ ಚಾಲಕ ಕುಮಾರ್ ಎಂಬವರು, "ಇಂಥ ಅಕ್ರಮ ಹಣವನ್ನು ನಮ್ಮ ಖಾತೆಯಲ್ಲಿ ಠೇವಣಿ ಮಾಡಲು ಸ್ಥಳೀಯ ಉದ್ಯಮಿಗಳು ಏಜೆಂಟರನ್ನು ನೇಮಕ ಮಾಡಿದ್ದಾರೆ. ಈ ಸ್ಥಳೀಯ ಗೂಂಡಾ ಈಗಾಗಲೇ ಆರು ಮಂದಿಯ ಕೈಯಲ್ಲೂ ಹಣ ವಾಪಸ್ ಪಡೆಯುವ ನಮೂನೆಗೆ ಸಹಿ ಮಾಡಿಸಿಕೊಂಡಿದ್ದಾರೆ" ಎಂದು ವಾಸ್ತವ ತೆರೆದಿಟ್ಟರು.
"ನಾನು ನಮ್ಮ ಮಾಲಕನಿಗೆ ಮೋಸ ಮಾಡಿದರೆ, ಮುಂದೆಂದೂ ಈ ಭಾಗದ ಜನ ಉದ್ಯೋಗ ಪಡೆಯಲು ಸಾಧ್ಯವಿಲ್ಲ" ಎಂದು ಮತ್ತೊಬ್ಬ ಚಾಲಕ ಅಭಿಪ್ರಾಯಪಟ್ಟರು. ತನ್ನ ಮಾಲಕ, ಟ್ರಾನ್‌ಪೋರ್ಟರ್ ಒಬ್ಬರು ಸುಮಾರು 23 ಜನಧನ್ ಖಾತೆಗಳಲ್ಲಿ 50 ಸಾವಿರದಿಂದ 90 ಸಾವಿರ ರೂಪಾಯಿವರೆಗೆ ಹಾಕಿದ್ದಾರೆ. ಬಹುತೇಕ ಎಲ್ಲರೂ ನಮ್ಮ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುವವರ ಪತ್ನಿ ಅಥವಾ ಕುಟುಂಬದವರು" ಎಂದು ವಿವರಿಸಿದ್ದಾರೆ. "ನಮಗೆ 50 ಸಾವಿರಕ್ಕಿಂತ ನಮ್ಮ ಉದ್ಯೋಗ ಮುಖ್ಯ" ಎನ್ನುವುದು ಅವರ ವಿಶ್ಲೇಷಣೆ.
ಬಹರಿಯಾಚ್‌ನಲ್ಲಿ ಒಬ್ಬ ಕೂಲಿ ಕಾರ್ಮಿಕನಿಗೆ ಜನಧನ್ ಖಾತೆಗೆ ಹಣ ಜಮೆ ಮಾಡಲು ಕಮಿಷನ್ ಆಮಿಷ ಒಡ್ಡಲಾಗಿದೆ. ಜನಧನ್ ಖಾತೆಗೆ 2.5 ಲಕ್ಷ ರೂಪಾಯಿ ಹಾಕಲು ಶೇಕಡ 10ರಂತೆ ಕಮಿಷನ್ ನೀಡಲಾಗಿದೆ. ಅದು ಒಬ್ಬ ದೊಡ್ಡ ಎಂಜಿನಿಯರ್‌ಗೆ ಸೇರಿದ ಹಣ. ಇಂಥ ಎಷ್ಟು ನಿದರ್ಶನಗಳನ್ನು ಪ್ರಧಾನಿಗೆ ವಿವರಿಸಲು ಸಾಧ್ಯ? ಎಂದು ಅವರು ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News