ಅಮ್ಮನ ನಿರ್ಗಮನ, ಶಶಿಕಲಾ ಆಗಮನ !

Update: 2016-12-06 04:04 GMT

ಚೆನ್ನೈ, ಡಿ.6: 'ಅಮ್ಮ'ನ ನಿರ್ಗಮನ ಹಿನ್ನೆಲೆಯಲ್ಲಿ ಅವರ ನಿಕಟವರ್ತಿ, ಹಣಕಾಸು ಸಚಿವ ಪನ್ನೀರ್‌ ಸೆಲ್ವಮ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಅವರ ಆಪ್ತ ಗೆಳತಿ ಶಶಿಕಲಾ, ಎಐಎಡಿಎಂಕೆ ಪಕ್ಷದ ನಿಯಂತ್ರಣ ತೆಗೆದುಕೊಳ್ಳುವುದು ಬಹುತೇಕ ಖಚಿತ.
ಶಶಿಕಲಾ ಅಥವಾ ಅವರು ಸೂಚಿಸುವ ವ್ಯಕ್ತಿಯನ್ನು ಪಕ್ಷದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.

"ಪನ್ನೀರ್‌ ಸೆಲ್ವಂ ಮುಖ್ಯಮಂತ್ರಿಯಾಗಿರುವುದರಿಂದ, ಶಶಿಕಲಾ ಅಥವಾ ಎಐಎಡಿಎಂಕೆ ಸಂಸದ ಹಾಗೂ ಲೋಕಸಭೆಯ ಉಪಸ್ಪೀಕರ್ ಎಂ.ತಂಬಿದೊರೈ ಅವರು ಪಕ್ಷದ ಚುನಾಯಿತ ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆ" ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಬಹಿರಂಗಪಡಿಸಿದ್ದಾರೆ.
ದಿಢೀರ್ ಬೆಳವಣಿಗೆಯಿಂದ ಪಕ್ಷಕ್ಕೆ ಯಾವುದೇ ಅಪಾಯ ಇಲ್ಲ ಎಂದು ಸಚಿವರೊಬ್ಬರು ಸ್ಪಷ್ಟಪಡಿಸಿದ್ದಾರೆ. "ಸಂಸತ್ತಿನ ಉಭಯ ಸದನಗಳಲ್ಲಿ 50 ಸಂಸದರನ್ನು ಹೊಂದಿರುವ ನಮ್ಮ ಪಕ್ಷ ಬಿಜೆಪಿಯನ್ನು ಬೆಂಬಲಿಸುವವರೆಗೂ ನಮ್ಮನ್ನು ಅಸ್ಥಿರಗೊಳಿಸುವ ಯಾವ ಪ್ರಯತ್ನವೂ ನಡೆಯದು. ಪಕ್ಷವನ್ನು ಪನ್ನೀರ್‌ ಸೆಲ್ವಂ ಹಾಗೂ ತಂಬಿದೊರೈ ಇನ್ನಷ್ಟು ಸದೃಢಗೊಳಿಸುತ್ತಾರೆ" ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ನೂತನ ಸಂಪುಟದ ಹಿರಿಯ ಮುಖಂಡ ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಶೀಲಾ ಭಾಸ್ಕರನ್ ಅವರು ಸಲಹೆಗಾರರಾಗಿ ನೆರವು ನೀಡುವರು. ಶಶಿಕಲಾ ಅವರಿಗೆ ಪಕ್ಷದಲ್ಲಿ ಸದ್ಯಕ್ಕೆ ಯಾವ ವಿರೋಧಿಗಳೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಕೂಡಾ ತಂಬಿದೊರೈ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದೆ. ಪಕ್ಷ ಪ್ರಬಲವಾಗಿರುವ ಪಶ್ಚಿಮ ತಮಿಳುನಾಡಿನ ಕೊಂಗು ಪ್ರದೇಶದಿಂದ ಇವರು ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News