ಕುರ್ನಾಡು: ಪ್ರಾ. ಆ. ಕೇಂದ್ರದ ಕಟ್ಟಡ ಕಾಮಗಾರಿಗೆ ಯು.ಟಿ.ಖಾದರ್ ಶಿಲಾನ್ಯಾಸ
ಕೊಣಾಜೆ, ಡಿ.6: ಆಹಾರ ಪದ್ಧತಿ, ಸ್ವಚ್ಛತೆ, ಜೀವನ ಶೈಲಿ ಕ್ರಮಬದ್ದವಾಗಿದ್ದರೆ ಯಾವುದೇ ಖಾಯಿಲೆ ನಮ್ಮನ್ನು ಭಾದಿಸದು. ಆದರೆ ಇಂದು ಮಾನಸಿಕ ಒತ್ತಡದಿಂದಲೇ ಹೆಚ್ಚೆಚ್ಚು ಖಾಯಿಲೆಗಳು ಮನುಷ್ಯರಿಗೆ ಬರುತ್ತಿದೆ. ಎಲ್ಲ ರೋಗಕ್ಕೂ ಮದ್ದು ಇದೆ. ಮಾನಸಿಕ ಒತ್ತಡ ನಿವಾರಣೆಗೆ ಮದ್ದು ಇಲ್ಲ. ಎಷ್ಟೇ ಸಮಸ್ಯೆ ಇದ್ದರೂ ಅದನ್ನು ನಿಭಾಯಿಸಿಕೊಂಡು ನೆಮ್ಮದಿಯಿಂದಿದ್ದರೆ ಉತ್ತಮ ಆರೋಗ್ಯವಚಿತ ಜೀವನವನ್ನು ಕಂಡುಕೊಳ್ಳಲು ಸಾಧ್ಯ ಎಂದು ಸಚಿವ ಯು.ಟಿ.ಖಾದರ್ ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಬಂಟ್ವಾಳ ತಾಲೂಕು ಪಂಚಾಯಿತಿ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯಡಿಯಲ್ಲಿ ಬಂಟ್ವಾಳ ತಾಲೂಕಿನ ಕುರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ ಮಂಗಳವಾರ ಶಿಲಾನ್ಯಾಸಗೈದು ಅವರು ಮಾತನಾಡಿದರು.
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಪಂಚದಲ್ಲಿ ಎಷ್ಟೇ ದೊಡ್ಡ ಆಸ್ಪತ್ರೆಗಳಿದ್ದರೂ ನಮ್ಮ ದೇಶದಲ್ಲಿ ಸಿಗುವ ಚಿಕಿತ್ಸೆ ಮಾನವೀಯ ಸೇವೆ ಲಭ್ಯವಾಗದು. ಜೊತೆಗೆ ಶುಲ್ಕದ ವಿಚಾರದಲ್ಲೂ ಕಡಿಮೆ ಶುಲ್ಕ ವಿಧಿಸಲಾಗುತ್ತಿದ್ದು ರೋಗಿಗಳನ್ನು ನಿಜವಾಗಿಯೂ ಎಲ್ಲ ವಿಧದಲ್ಲೂ ಬದುಕಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ರೋಗ ಬಂದ ನಂತರ ತಲೆ ಬಿಸಿ ಮಾಡುವುದಕ್ಕಿಂತ ರೋಗ ಬರದಂತೆ ಮುಂಚಿತವಾಗಿ ಜಾಗೃತಿ ವಹಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಮೂರು ತಿಂಗಳವರೆಗೆ ಕಾಯುತ್ತಾರೆ. ಕರ್ನಾಟಕ ಸರಕಾರದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ದೇಶದಲ್ಲಿಯೇ ಗರಿಷ್ಠ ವೇತನ ನೀಡಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಕೇವಲ ಐದು ನಿಮಿಷದ ತಪಾಸಣೆಗೆ ಬೇಕಾದಷ್ಟು ವೈದ್ಯರು, ಸಿಬ್ಬಂದಿಗಳು ಲಭ್ಯರಿದ್ದರೂ ಜನರು ತಮ್ಮ ಆರೋಗ್ಯ ಪರೀಕ್ಷೆ ನಡೆಸುವತ್ತ ಕಾಳಜಿ ವಹಿಸುತ್ತಿಲ್ಲ ಎಂದರು.
ಚಾರ್ಮಾಡಿ, ಅಂಬ್ಲಮೊಗರು, ಮಂಚಿ, ಕಡಬ, ಕೊಕ್ಕಡ, ಕುರ್ನಾಡು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೆಂದ್ರದ ಅಭಿವೃದ್ಧಿಗೆ ಮೂಲ ಸೌಲಭ್ಯ ಒದಗಿಸಲು ಅನುದಾನ ಬಿಡುಗಡೆ ಮಾಡಿದ್ದು ಕಾಮಗಾರಿ ನಡೆಯುತ್ತಿದೆ. ಕರ್ನಾಟಕದಲ್ಲಿ 25ಸಾವಿರ ಆಶಾ ಕಾರ್ಯಕರ್ತರು ಜನಸಮಾನ್ಯರಿಗೆ ಕೊಂಡಿಯಾಗಿದ್ದು ಜನರಿಗೆ ಮಾಹಿತಿ ಕೊಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಹಾಗೂ ಎಪಿಎಲ್ ಕಾರ್ಡ್‌ದಾರರಿಗೆ 70ಶೇ. ಶುಲ್ಕ ಉಚಿತವಿದ್ದರೂ ಸೌಲಭ್ಯ ಪಡೆಯಲು ಹಿಂಜರಿಯುತ್ತಿರುವುದು ಖೇದನೀಯ ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಪಿ. ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯರುಗಳಾದ ನವೀನ್ ಕುಮಾರ್ ಪಾದಲ್ಪಾಡಿ, ಹೈದರ್ ಕೈರಂಗಳ, ಸವಿತಾ ಹೇಮಂತ್ ಕರ್ಕೇರ, ಮಾಜಿ ಸದಸ್ಯ ಉಮ್ಮರ್ ಪಜೀರು, ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಶೈಲಜಾ ಮಿತ್ತಕೋಡಿ, ಮಾಜಿ ಅಧ್ಯಕ್ಷ ಪ್ರಶಾಂತ್ ಕಾಜವ ಹಾಗೂ ದೇವದಾಸ್ ಭಂಡಾರಿ ಕುರ್ನಾಡು, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಸಜಿಪ ಪಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾವತಿ, ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಬೋಳಿಯಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ, ನಾಸೀರ್ ನಡುಪದವು, ಅಬ್ದುಲ್ ಜಲೀಲ್ ಮೋಂಟುಗೋಳಿ,ಕುರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅರವಿಂದ್ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಾ ಪ್ರಭು ಸ್ವಾಗತಿಸಿದರು. ಕೆಎಚ್‌ಎಸ್‌ಡಿಆರ್‌ಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಘುಚಂದ್ರ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಯರಾಮ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.