ಟ್ರಂಪ್ ಪರ ಸುಳ್ಳು ಸುದ್ದಿ ಸೃಷ್ಟಿಸುವುದೇ ಈ ನಗರದ ಪ್ರಮುಖ ಉದ್ಯಮ!
ವೆಲೆಸ್(ಮ್ಯಾಸಿಡೋನಿಯಾ),ಡಿ.6: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಂದರ್ಭ ನಾಯಿಕೊಡೆಗಳಂತೆ ತಲೆಯೆತ್ತಿದ್ದ ಹೆಚ್ಚಿನ ಸುಳ್ಳುಸುದ್ದಿಗಳ ವೆಬ್‌ಸೈಟ್‌ಗಳು ಸೇರಿದ್ದು ಮ್ಯಾಸಿಡೋನಿಯಾದ ಈ ಪುಟ್ಟ ಊರಿಗೆ ಎನ್ನುವುದು ಈಗ ಬೆಳಕಿಗೆ ಬಂದಿದೆ. ಜಾಹೀರಾತುಗಳಿಂದ ಹಣ ಮಾಡುವುದನ್ನೇ ದಂಧೆಯನ್ನಾಗಿಸಿಕೊಂಡಿ ರುವ ಇಲ್ಲಿಯ ಹದಿಹರೆಯದ ಯುವಕರು ಸತ್ಯದ ತಲೆಯ ಮೇಲೆ ಹೊಡೆಯುವಂತಹ ಸುಳ್ಳು ರೋಚಕ ಸುದ್ದಿಗಳನ್ನು ಪುಂಖಾನುಪುಂಖವಾಗಿ ಹೊರಹಾಕುತ್ತಲೇ ಇರುತ್ತಾರೆ.
ಇಲ್ಲಿಯ ಕೆಫೆಗಳಲ್ಲಿ, ರೆಸ್ಟೋರಂಟ್‌ಗಳಲ್ಲಿ.....ಬಾರ್‌ಗಳಲ್ಲಿಯೂ ಇಂತಹ ಸುಳ್ಳುಸುದ್ದಿ ಗಳನ್ನು ಹೆಣೆಯುವುದರಲ್ಲಿ ಮಗ್ನರಾಗಿರುವ ಹುಡುಗರು ಕಾಣಸಿಗುತ್ತಾರೆ.ಅವರು ಧರಿಸಿರುವ ದುಬಾರಿ ಉಡುಪುಗಳು,ಡಿಸೈನರ್ ವಾಚುಗಳು,ಮಾಡುತ್ತಿರುವ ಖರ್ಚುಗಳು ಅವರು ಈ ಸುಳ್ಳುಸುದ್ದಿಗಳಿಂದ ಕೈತುಂಬ ದುಡ್ಡು ಸಂಪಾದಿಸುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತವೆ. ಈ ಊರಿನಲ್ಲಿ ಉದ್ಯೋಗಗಳಲ್ಲಿರುವವರ ಮಾಸಿಕ ವೇತನ ಸರಾಸರಿ 350 ಯುರೋ ದಾಟುವುದಿಲ್ಲ. ಆದರೆ ಈ ಸುಳ್ಳುಸುದ್ದಿಗಳ ಸೃಷ್ಟಿಕರ್ತರು ತಿಂಗಳಿಗೆ ಕನಿಷ್ಠ ಒಂದೆರಡು ಸಾವಿರ ಯುರೋಗಳನ್ನು ಸಂಪಾದಿಸುತ್ತಾರೆ.
ವೆಲೆಸ್‌ನಲ್ಲಿ ಇದೊಂದು ಗುಡಿ ಕೈಗಾರಿಕೆಯಂತಾಗಿಬಿಟ್ಟಿದೆ. ಅಮೇರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭ ಡೊನಾಲ್ಡ್ ಟ್ರಂಪ್ ಪರವಾಗಿ ಸಹಸ್ರಾರು ಸುಳ್ಳುಸುದ್ದಿಗಳನ್ನು ಇಲ್ಲಿಯ ಹುಡುಗರು ಸೃಷ್ಟಿಸಿ ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದರು.
ಕಳೆದ ಬೇಸಿಗೆಯಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯು ಕಾವೇರಿದ್ದಾಗ ವೆಲೆಸ್‌ನ ಯುವಜನರು ಬಲಪಂಥೀಯ ಅಮೆರಿಕನ್ ವೆಬ್‌ಸೈಟ್‌ಗಳನ್ನು ತಡಕಾಡಿ ರೋಚಕ ಸುದ್ದಿಗಳನ್ನೆತ್ತಿಕೊಂಡಿದ್ದರು. ವಿವಿಧ ಲೇಖನಗಳ ಕಾಪಿಯಿಂಗ್ ಮತ್ತು ಪೇಸ್ಟಿಂಗ್ ಬಳಿಕ ಅದಕ್ಕೆ ತಮ್ಮದೊಂದಿಷ್ಟು ಸುಳ್ಳನ್ನು ಬೆರೆಸಿ ಟ್ರಂಪ್‌ರನ್ನು ವೈಭವೀಕರಿಸಿ ಅವುಗಳನ್ನು ಟಂ್ರಪ್ ಸುದ್ದಿಗಾಗಿ ಹಸಿದುಕೊಂಡಿದ್ದ ಅಮೆರಿಕದ ಜನರನ್ನು ಗುರಿಯಾಗಿಸಿಕೊಂಡು ವೆಬ್‌ಸೈಟ್‌ಗಳಿಗೆ ಪೋಸ್ಟ್ ಮಾಡುತ್ತಿದ್ದರು. ಅಮೆರಿಕನ್ನರು ಇಂತಹ ಸುದ್ದಿಗಳ ಮೇಲೆ ಕ್ಲಿಕ್ ಮಾಡಿದಾಗೆಲ್ಲ ವೆಬ್‌ಸೈಟ್‌ಗಳಲ್ಲಿನ ಜಾಹೀರಾತುಗಳಿಂದ ಅವರಿಗೆ ಆದಾಯ ಹರಿದು ಬರುತ್ತಿತ್ತು.
ನಿಮ್ಮ ಇಂತಹ ಸುಳ್ಳುಸುದ್ದಿಗಳು ಅಮೆರಕದ ಮತದಾರರ ಮೇಲೆ ಅನುಚಿತ ಪ್ರಭಾವ ಬೀರಿರಬಹುದಲ್ಲವೇ ಎಂಬ ಪ್ರಶ್ನೆಯನ್ನು ಕೇಳಿದರೆ ಇಲ್ಲಿಯ ಸುಳ್ಳುಸುದ್ದಿ ಸೃಷ್ಟಿಕರ್ತರು ನಕ್ಕುಬಿಡುತ್ತಾರೆ. ಅಮೆರಿಕದವರು ಯಾರಿಗೆ ಬೇಕಾದರೂ ಮತ ಹಾಕಿರಲಿ,ನಮಗೇಕೆ ಅದರ ಗೊಡವೆ ಎನ್ನುತ್ತಾರೆ.