×
Ad

ಜಗತ್ತಿನ ಅತ್ಯಂತ ತೂಕದ ಮಹಿಳೆಗೆ ಭಾರತದಿಂದ ನೆರವು

Update: 2016-12-06 18:42 IST

ಕೈರೋ, ಡಿ. 6: ಈಜಿಪ್ಟ್‌ನ 36 ವರ್ಷದ ಪ್ರಜೆ, ಜಗತ್ತಿನ ಅತಿ ಭಾರದ ಮಹಿಳೆಗೆ ಚಿಕಿತ್ಸೆ ಪಡೆಯಲು ಭಾರತದ ವೀಸಾ ನಿರಾಕರಿಸಲಾಗಿತ್ತು ಎನ್ನುವ ವಿಷಯ ಬೆಳಕಿಗೆ ಬಂದಿದೆ.

ಆದರೆ, ಈ ವಿಷಯವನ್ನು ಮಹಿಳೆಯ ವೈದ್ಯರು ಟ್ವಿಟರ್ ಮೂಲಕ ಭಾರತದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‌ರ ಗಮನಕ್ಕೆ ತಂದ ಬಳಿಕ ಈ ವಿವಾದ ಅಂತ್ಯಗೊಂಡಿದೆ.

ಮುಂಬೈಯ ಸರ್ಜನ್ ಡಾ. ಮುಫ್ಪಿ ಲಕ್ಡಾವಾಲಾ ನಿನ್ನೆ ವಿದೇಶ ಸಚಿವರಿಗೆ ಈ ವಿಷಯವನ್ನು ಟ್ವೀಟ್ ಮಾಡಿದ್ದರು. ‘‘ಮೇಡಂ, ತನ್ನ ಪ್ರಾಣ ಉಳಿಸುವಂತೆ 500 ಕೆಜಿ ತೂಗುವ ಈಜಿಪ್ಟ್‌ನ ಇಮಾನ್ ಅಹ್ಮದ್ ನನ್ನಲ್ಲಿ ವಿನಂತಿಸಿದ್ದಾರೆ. ಅವರಿಗೆ ವೈದ್ಯಕೀಯ ವೀಸಾವೊಂದನ್ನು ದೊರಕಿಸಿಕೊಡಲು ದಯವಿಟ್ಟು ನನಗೆ ಸಹಾಯ ಮಾಡಿ. ಸಾಮಾನ್ಯ ಪ್ರಕ್ರಿಯೆಯಲ್ಲಿ ವೀಸಾ ನಿರಾಕರಿಸಲಾಗಿದೆ’’ ಎಂಬುದಾಗಿ ಅವರು ಟ್ವೀಟ್ ಮಾಡಿದ್ದರು.

ಮೂತ್ರಪಿಂಡದ ವೈಫಲ್ಯಕ್ಕಾಗಿ ಈಗ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಶ್ಮಾ ಅದೇ ದಿನ ವೈದ್ಯರಿಗೆ ಟ್ವೀಟ್ ಮಾಡಿದ್ದಾರೆ. ‘‘ಈ ವಿಷಯವನ್ನು ನನ್ನ ಗಮನಕ್ಕೆ ತಂದಿರುವುದಕ್ಕಾಗಿ ಧನ್ಯವಾದ. ನಾವು ಅವರಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತೇವೆ’’ ಎಂಬುದಾಗಿ ಸುಶ್ವಾ ಟ್ವೀಟ್ ಮಾಡಿದರು.

ಇಮಾನ್ ಅಹ್ಮದ್ ಅಬ್ದುಲಾಟಿ ಈಜಿಪ್ಟ್‌ನ ಅಲೆಕ್ಸಾಂಡ್ರಿಯದಲ್ಲಿ ವಾಸಿಸುತ್ತಿದ್ದಾರೆ. 25 ವರ್ಷಗಳ ಹಿಂದೆ ಅವರು 11 ವರ್ಷದವರಾಗಿದ್ದಾಗ ಅವರು 500 ಕೆಜಿ ತೂಗಿದ್ದರು. ಅಂದಿನಿಂದ ಅವರು ತನ್ನ ಮನೆಯಿಂದ ಹೊರಬಂದಿಲ್ಲ. ಅವರಿಗೆ ನಡೆಯಲು ಅಥವಾ ಹಾಸಿಗೆಯಲ್ಲಿ ಹೊರಳಲೂ ಆಗುತ್ತಿಲ್ಲ ಎಂದು ‘ಅಲ್‌ಅರೇಬಿಯ.ನೆಟ್’ ವರದಿ ಮಾಡಿದೆ.

ಅಬ್ದುಲಾಟಿಯ ಸಮಸ್ಯೆ ಹುಟ್ಟಿನಿಂದಲೇ ಆರಂಭವಾಗಿತ್ತು. ಆಕೆ ಹುಟ್ಟುವಾಗಲೇ 5 ಕೆಜಿ ತೂಗುತ್ತಿದ್ದರು. ಆಕೆಯ ಭಾರವನ್ನು ಹೊರಲು ಕಾಲುಗಳಿಗೆ ಅಸಾಧ್ಯವಾದ ಕಾರಣ ಅವರು ಚಿಕ್ಕವರಿರುವಾಗಲೇ ಅಂಬೆಗಾಲಿನಲ್ಲಿ ನಡೆಯಲು ಆರಂಭಿಸಿದರು. ವಯಸ್ಸು 11 ಆದಾಗ ಆಕೆ ಇನ್ನಷ್ಟು ತೂಕವನ್ನು ಸೇರಿಸಿಕೊಂಡರು.

ಆಗ ಅವರು ಶಾಲೆಗೆ ಹೋಗುವುದನ್ನು ನಿಲ್ಲಿಸಿದರು. ಬಳಿಕ ಅವರು ಮೆದುಳಿನ ಪಾರ್ಶ್ವವಾಯುವಿಗೆ ಒಳಗಾದರು. ಅದರಿಂದಾಗಿ ಅವರು ಇಂದಿಗೂ ಹಾಸಿಗೆಯನ್ನು ಬಿಟ್ಟು ಏಳಲು ಸಾಧ್ಯವಾಗಿಲ್ಲ.

ಗಡ್ಕರಿ, ವೆಂಕಯ್ಯಗೂ ಚಿಕಿತ್ಸೆ ನೀಡಿದ್ದ ವೈದ್ಯ
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ವೆಂಕಯ್ಯ ನಾಯ್ಡು, ಕೈಗಾರಿಕೋದ್ಯಮಿ ದಿಲೀಪ್ ಪಿರಾಮಾಳ್, ರಾಜಕಾರಣಿಗಳಾದ ಅನಿಲ್ ದೇಶ್‌ಮುಖ್ ಮತ್ತು ನಿತಿನ್ ರಾವುತ್ ಹಾಗೂ ಬಾಲಿವುಡ್ ತಾರೆ ಸಲ್ಮಾನ್ ಖಾನ್‌ರ ತಾಯಿ ಸಲ್ಮಾ ಅವರಿಗೂ ಬೊಜ್ಜು ಕರಗಿಸುವ ಚಿಕಿತ್ಸೆಯನ್ನು ವೈದ್ಯ ಡಾ. ಲಕ್ಡಾವಾಲ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News