×
Ad

ಎತ್ತಿನ ಹೊಳೆ ರಥ ಯಾತ್ರೆ - ಮರ್ಧಾಳದಲ್ಲಿ ಬೃಹತ್ ಸಭೆ

Update: 2016-12-06 19:01 IST

ಕಡಬ, ಡಿ.6. ನೇತ್ರಾವತಿ ಜೀವ ನದಿಯ ಉಳಿವಿಗಾಗಿ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಡಿ. 10 ರಂದು ನಡೆಯಲಿರುವ ರಥಯಾತ್ರೆಗೆ ಕಡಬ ಭಾಗದ ವಿವಿಧ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು , ಈ ಸಂಬಂಧ ಕಡಬ ಸಮೀಪದ ಮರ್ದಾಳದಲ್ಲಿ ಬೃಹತ್ ಸಭೆ ನಡೆಯಲಿದೆ ಎಂದು ಕಡಬದ ಹಿರಿಯ ಸಾಹಿತಿ ಧಾರ್ಮಿಕ ಮುಂದಾಳು ಕೆ. ಗೋಪಾಲ್ ರಾವ್ ಹೇಳಿದರು.

ಅವರು ಸೋಮವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎತ್ತಿನ ಹೊಳೆ ಯೋಜನೆಯನ್ನು ಸರಕಾರ ಕೈಬಿಟ್ಟು ದ.ಕ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರ ನದಿಗಳನ್ನು ಉಳಿಸುವ ಉದ್ದೇಶದಿಂದ ಜಲ ಮತ್ತು ಪುಣ್ಯ ನೆಲದ ರಕ್ಷಣೆಯ ಜಾಗೃತಿಗಾಗಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ರಾಜಕೀಯ ರಹಿತವಾಗಿ ನಡೆಯುವ ಪಂಚ ತೀರ್ಥ ಸಪ್ತ ಕ್ಷೇತ್ರ ರಥ ಯಾತ್ರೆಯು ಡಿ. 10 ನೇ ಶನಿವಾರ ಸುಬ್ರಹ್ಮಣ್ಯದಿಂದ ಹೊರಟು ಡಿ. 12 ರಂದು ಕಟೀಲಿನಲ್ಲಿ ಸಮಾಪನಗೊಳ್ಳಿದೆ.

ಮಲೆ ನಾಡಿನ ತಪ್ಪಲಿನಿಂದ ಪಡುವಣ ಕಡಲ ತಡಿಯವರೆಗೆ ಪವಿತ್ರ ಜಲ ಪುಣ್ಯ ನೆಲಗಳ ರಕ್ಷಣೆಗಾಗಿ ಪವಿತ್ರ ನದಿಗಳಾದ ನೇತ್ರಾವತಿ, ಕುಮಾರಾಧಾರೆ, ಪಲ್ಗುಣಿ, ಶಾಂಬವಿ, ನಂದಿನಿ ನದಿಗಳ ನೀರಿನ ಕಲಶದೊಂದಿಗೆ ಪಂಚ ತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ ಸುಬ್ರಹ್ಮಣ್ಯದಲ್ಲಿ ಉದ್ಘಾಟನೆಗೊಂಡು ಮಧ್ಯಾಹ್ನ ಮರ್ಧಾಳಕ್ಕೆ ರಥ ಯಾತ್ರೆ ಆಗಮಿಸಲಿದೆ.

ಇಲ್ಲಿ ಸಾರ್ವಜನಿಕರಿಂದ ರಥಕ್ಕೆ ಅಭೂತಪೂರ್ವ ಸ್ವಾಗತ ನೀಡಲಾಗುವುದು. ಈ ಸಂದರ್ಭದಲ್ಲಿ ಬೃಹತ್ ಸಭೆ ನಡೆಯಲಿದ್ದು ನಮ್ಮ ಜೀವನದಿಗಳಾದ ಕುಮಾರಧಾರ ಹಾಗೂ ನೇತ್ರಾವತಿ ನದಿಗಳ ಉಳಿವಿಗಾಗಿ ನಾವು ಈ ಕಾರ್ಯಕ್ರಮದಲ್ಲಿ ಧರ್ಮ, ಜಾತಿ, ಮತ, ಪಕ್ಷ ಭೇಧ ಮರೆತು ಸಾವಿರಾರು ಜನ ಪಾಲ್ಗೊಳ್ಳಲು ನಿರ್ಧರಿಸಿದ್ದೇವೆ. ಹೋರಾಟವನ್ನು ಯಶಸ್ಸಿಗೊಳಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಗೋಪಾಲ ರಾವ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಎ.ಪಿ.ಎಂ.ಸಿ. ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಕಡಬ ರೋಟರಿ ಕ್ಲಬ್ ಮುಖಂಡ ಮಹಮ್ಮದ್ ಕುಂಞಿ, ಲಯನ್ಸ್ ಕ್ಲಬ್ ಮುಖಂಡ ಸ್ಕರಿಯ ಕಳಾರ, ಕಡಬ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಕಳಾರ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಡ್ಕಾಡಿ, ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ ಜಯರಾಮ ಗೌಡ ಅರ್ತಿಲ, ಅಲಾರ್ಮೆ ಸ್ನೇಹ ಸೇತು ಯುವಕ ಮಂಡಲದ ಉಪಾಧ್ಯಕ್ಷ ಕ್ಸೇವಿಯರ್ ಬೇಬಿ, ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ, ವಿವಿಧ ಸಂಘಟನೆಗಳ ಪ್ರಮುಖರಾದ ಪ್ರಕಾಶ್ ಎನ್.ಕೆ, ಸತೀಶ್ ನಾಯಕ್, ಸತೀಶ್ ಪೂಜಾರಿ, ಆದಂ ಕುಂಡೋಳಿ, ಫಯಾಜ್ ಕೆನರಾ, ಮಧುಸೂಧನ್ ಕೊಂಬಾರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News