×
Ad

ಈಗ ನೋಟು ರದ್ದತಿ ಸಮಸ್ಯೆ ಪರಿಹರಿಸಲು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ

Update: 2016-12-06 19:18 IST

ಮಾಸ್ಕೊ, ಡಿ.6: ಭಾರತವು ನೋಟು ನಿಷೇಧಿಸಿರುವುದರಿಂದ ದಿಲ್ಲಿಯಲ್ಲಿ ತನ್ನ ರಾಜತಂತ್ರಜ್ಞರು ಹಣಕ್ಕಾಗಿ ಹೆಣಗಾಡುವಂತಾಗಿದೆ. ಈ ಬಗ್ಗೆ ಪ್ರತಿ-ಕ್ರಮ ಕೈಗೊಳ್ಳಲಾಗುವುದು ಹಾಗೂ ಭಾರತದೊಂದಿಗೆ ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸುವೆನೆಂದು ರಶ್ಯ ಬೆದರಿಕೆ ಹಾಕಿದೆ.
ರಾಯಭಾರಿ ಅಲೆಗ್ಸಾಂಡರ್ ಕಡಕಿನ್, ತಾನು ಡಿ.2ರಂದು ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಬರೆದಿರುವ ಪತ್ರಕ್ಕೆ ಉತ್ತರವನ್ನು ಕಾಯುತ್ತಿದ್ದಾರೆ. ನ.8ರಂದು ನೋಟು ರದ್ದತಿಯ ಬಳಿಕ ದೂತವಾಸಕ್ಕೆ ವಾರಕ್ಕೆ ರೂ. 50 ಸಾವಿರ ಹಿಂದೆಗೆತದ ಮಿತಿ ಹೇರಲಾಗಿದೆ. ಅದನ್ನು ಪ್ರತಿಭಟಿಸಲು ರಶ್ಯವು ಭಾರತೀಯ ರಾಯಭಾರಿಗೆ ಸಮನ್ಸ್ ಕಳುಹಿಸುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ.

ಭಾರತ ಸರಕಾರ ಹೇರಿರುವ ಮಿತಿಯು ‘ಒಂದು ಒಳ್ಳೆಯ ಊಟಕ್ಕೂ ಸಾಕಾಗದು’. ಅದು ಕಾರ್ಯಾಚರಣೆ ವೆಚ್ಚಕ್ಕೆ ಸಾಲುವುದಿಲ್ಲವೆಂದು ಕಡಕಿನ್ ಪತ್ರದಲ್ಲಿ ಬರೆದಿದ್ದಾರೆ. ಅಂತಹ ದೊಡ್ಡ ದೂತವಾಸವು ಹಣವಿಲ್ಲದೆ ದಿಲ್ಲಿಯಲ್ಲಿ ಹೇಗೆ ಕೆಲಸ ಮಾಡಬಲ್ಲುದೆಂದು ಅವರು ಪ್ರಶ್ನಿಸಿದ್ದಾರೆ.
ರಶ್ಯ ಸರಕಾರದ ಮೂಲಗಳು ನೋಟು ರದ್ದತಿಯನ್ನು ‘ಅಂತಾರಾಷ್ಟ್ರೀಯ ಸನದಿನ ಉಲ್ಲಂಘನೆ’ ಎಂದು ಆರೋಪಿಸಿದೆ. ದಿಲ್ಲಿಯ ರಶ್ಯನ್ ದೂತವಾಸದಲ್ಲಿ ಸುಮಾರು 200 ಮಂದಿಯಿದ್ದಾರೆ.

ವಿದೇಶಾಂಗ ಸಚಿವಾಲಯವು ಈ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಅದು ರಾಯಭಾರ ಕಚೇರಿಗಳು ಹಾಗೂ ಅನಿವಾಸಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆಯ ಕುರಿತು ಪರಿಶೀಲಿಸಲು ರಚಿಸಲಾಗಿರುವ ಅಂತಃ ಸಚಿವಾಲಯ ಕಾರ್ಯಪಡೆಯೊಂದರ ಶಿಫಾರಸುಗಳನ್ನು ಎದುರು ನೋಡುತ್ತಿದೆಯೆಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News