ಜಯಾ ನಿಧನದ ಬಳಿಕ ಎದ್ದು ಕಾಣಿಸಿದ ಶಶಿಕಲಾರ ಪ್ರಬಲ ವ್ಯಕ್ತಿತ್ವ

Update: 2016-12-06 13:56 GMT

ಚೆನ್ನೈ, ಡಿ.6: ಜಯಲಲಿತಾರ ನಿಕಟ ಸಂಗಾತಿ ಹಾಗೂ ಸದಾ ಪ್ರಾಮಾಣಿಕ ನೆರಳಿನಂತಿದ್ದ ಶಶಿಕಲಾ ನಟರಾಜನ್, ಮಂಗಳವಾರ ತಮಿಳುನಾಡಿನ ನಾಲ್ಕು ಬಾರಿಯ ಮುಖ್ಯಮಂತ್ರಿಗೆ ಅಂತಿಮ ನಮನ ಸಲ್ಲಿಸಲು ಚೆನ್ನೈಯ ಸಾರ್ವಜನಿಕ ಸಭಾಂಗಣವೊಂದಕ್ಕೆ ಲಕ್ಷಾಂತರ ಜನರು ಆಗಮಿಸುತ್ತಿದ್ದ ವೇಳೆ, ಜಯಾರ ಪಾರ್ಥಿವ ಶರೀರದ ಸಮೀಪವೇ ದೃಢವಾಗಿ ನಿಂತಿದ್ದರು.
ಮೃತ ದೇಹವನ್ನು ಶಶಿಕಲಾರ ಕುಟುಂಬ ಸದಸ್ಯರೇ ಸುತ್ತುಗಟ್ಟಿದ್ದರು ಹೊರತು ಎಡಿಎಂಕೆಯ ಯಾವನೇ ನಾಯಕ ಅಥವಾ ಜಯಾರ ನಿಷ್ಠ ಒ.ಪನ್ನೀರಸೆಲ್ವಂ ಆಗಲಿ ಇರಲಿಲ್ಲ. ಪನ್ನೀರ ಸೆಲ್ವಂ ಕಳೆದ ರಾತ್ರಿ ಜಯಾರ ಭಾವಚಿತ್ರವನ್ನು ವೇದಿಕೆಯಲ್ಲಿರಿಸಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಕಪ್ಪು ಸೀರೆಯುಟ್ಟು, ಕೆಂಪಾದ ಕಣ್ಣುಗಳೊಂದಿಗಿದ್ದ ಶಶಿಕಲಾರನ್ನು ಹಲವರು, ಜಯಲಲಿತಾರ ಪೊಯಸ್ ಗಾರ್ಡನ್‌ನ ಮನೆಯಲ್ಲಿ ದಶಕಗಳ ಕಾಲ ಸಹ ನಿವಾಸಿಯಾಗಿದ್ದು, ಮಾಜಿ ವಿಡಿಯೊ ಸ್ಟೋರ್ ಮಾಲಕಿ ಅನುಭವಿಸಿದ್ದ ಅಧಿಕಾರದ ದ್ಯೋತಕದಂತೆ ಕಂಡರು.
ಈ ಸಾಹಚರ್ಯದ ಫಲವಾಗಿ 59ರ ಹರೆಯದ ಶಶಿಕಲಾ, ತಮಿಳುನಾಡಿನ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿ, ಹಿನ್ನೆಲೆಯಿಂದ ಮೂಡಿ ಬರುತ್ತಿದ್ದಾರೆ. ಎಡಿಎಂಕೆಯ ಮೇಲೆ ತನ್ನ ಹಿಡಿತವನ್ನು ಉಳಿಸಿಕೊಳ್ಳಲು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅಥವಾ ಅವರ ಆಯ್ಕೆಯ ವ್ಯಕ್ತಿ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆಯೆಂದು ಮೂಲಗಳು ಹೇಳುತ್ತಿವೆ.
ಆದರೆ, ಈ ಉತ್ತರಾಧಿಕಾರ ಯೋಜನೆ, ಪನ್ನೀರ ಸೆಲ್ವಂರನ್ನು ಪಕ್ಷ ನಾಯಕರು ಒಗ್ಗಟ್ಟಿನಲ್ಲಿ ನೇಮಿಸಿದಂತೆ ಸುಗಮವಾಗಿ ಸಾಗದು.
ಜಯಲಲಿತಾರ 30 ವರ್ಷಗಳ ರಾಜಕೀಯ ಜೀವನದಲ್ಲಿ ಶಶಿಕಲಾರ ಮೇಲೆ ಅವರು ವಿಶ್ವಾಸವಿರಿಸಿದ್ದರು ಹಾಗೂ ಅವರ ಸಲಹೆಗಳನ್ನು ನಂಬುತ್ತಿದ್ದರಾದರೂ, ಶಶಿಕಲಾ ಸರಕಾರದಲ್ಲಿ ಅಥವಾ ಪಕ್ಷದಲ್ಲಿ ಯಾವ ಹುದ್ದೆಯನ್ನೂ ಪಡೆಯಲಿಲ್ಲ. ಅವರಿಬ್ಬರ ಸ್ನೇಹ 1980ರಷ್ಟು ಹಿಂದಿನದು.
ಶಶಿಕಲಾ ಲೆಕ್ಕ ನೀಡದ ಸಂಪತ್ತು ಹಾಗೂ ಭೂವ್ಯವಹಾರಗಳಿಗೆ ಸಂಬಂಧಿಸಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಎಡಿಎಂಕೆ ನಾಯಕರು ಈ ಪ್ರಕರಣಗಳಿಂದ ಪಕ್ಷವನ್ನು ದೂರವಿರಿಸಲು ಬಯಸುತ್ತಿದ್ದಾರಾದರೂ ಅದು ಅಷ್ಟು ಸುಲಭವಲ್ಲ.
ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಮೂಡಿ ಬಂದ ಮೂರು ಅಧಿಕಾರ ಕೇಂದ್ರಗಳಲ್ಲಿ ಶಶಿಕಲಾ ಒಬ್ಬರಾಗಿದ್ದಾರೆ. ಪನ್ನೀರ ಸೆಲ್ವಂ ಹಾಗೂ ಮಾಜಿ ಮುಖ್ಯಕಾರ್ಯದರ್ಶಿ ಶೀಲಾ ಬಾಲಕೃಷ್ಣನ್ ಇತರ ಇಬ್ಬರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News