ಕೈರಂಗಳ ಚೆಂಬೆತೋಟ ಜನರ ಸಮಸ್ಯೆಗೆ ಸ್ಪಂದಿಸಿದ ಸಚಿವ ಯು.ಟಿ.ಖಾದರ್

Update: 2016-12-06 14:25 GMT

ಕೊಣಾಜೆ , ಡಿ.6 :  ಕೈರಂಗಳ ಗ್ರಾಮದ ಚೆಂಬೆತೋಟದ ಪ್ರದೇಶಕ್ಕೆ ಸರಿಯಾದ ಸಂಪರ್ಕ ರಸ್ತೆಯೂ ಇರಲಿಲ್ಲ. ಮಾತ್ರವಲ್ಲದೆ ಇಲ್ಲಿ ಸರಿಯಾದ ಕಾಲ್ಸೇತುವೆಯು ಕೂಡಾ ಇಲ್ಲದ ಕಾರಣ ಜನರು ತಾವೇ ಅಡಿಕೆ ಮರವನ್ನೇ ಸೇತುವೆಯನ್ನಾಗಿಸಿದ್ದರು. ಈ ಅಪಾಯಕಾರಿ ಸೇತುವೆಯಲ್ಲಿಯೇ ವಿದ್ಯಾರ್ಥಿಗಳು, ವೃದ್ದರೂ ಸೇರಿದಂತೆ ಈ ಭಾಗದ ಜನರು ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇತ್ತು. ಅದರಲ್ಲೂ ಮಳೆಗಾಲದಲ್ಲಂತೂ ಜೀವ ಕೈಯಲ್ಲಿಡಿದೇ ಮರದ ಅಪಾಯಕಾರಿ ಸೇತುವೆಯನ್ನು ದಾಟಬೇಕಾಗಿತ್ತು.

 ಈ ಸಮಸ್ಯೆಗೆ ಚೆಂಬೆತೋಟದ ನಾಗರಿಕರು ಸ್ಥಳೀಯ ಜನಪ್ರತಿನಿಧಿಗಳ ಮೂಲಕ ನೂತನ ಕಾಲ್ಸೇತುವೆ ನಿರ್ಮಾಣಕ್ಕೆ ಮನವಿ ನೀಡಿದ್ದರು.

ಇದೀಗ ಸಚಿವ ಯು.ಟಿ.ಖಾದರ್ ಅವರು ಇಲ್ಲಿ ಸುಮಾರು ಎಂಟೂವರೇ ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಕಾಲ್ಸೇತುವೆಗೆ ಮಂಗಳವಾರ ಶಂಕುಸ್ಥಾಪನೆಯನ್ನು ನೆರವೇರಿಸುವುದರ ಮೂಲಕ ಈ ಭಾಗದ ಜನರ ಹಲವಾರು ವರುಷಗಳ ಬೇಡಿಕೆಗೆ ಸ್ಪಂದಿಸಿದ್ದಾರೆ.

ಅಲ್ಲದೆ ಇದಕ್ಕಿಂತ ಮುನ್ನ ಪಟ್ಟೋರಿ, ಲಾಡ , ಚೆಂಬೆತೋಟಕ್ಕೆ ಸಂಪರ್ಕಿಸುವ ನೂತನ ಕಾಂಕೀಟು ರಸ್ತೆಯನ್ನೂ ಸಚಿವರು ಉದ್ಘಾಟಿಸಿದರು. 

ಬಳಿಕ ನೂತನ ಕಾಲ್ಸೇತುವೆಗೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು ಚೆಂಬೆತೋಟ ಪ್ರದೇಶವು ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ಗಡಿ ಪ್ರದೇಶವಾಗಿದ್ದು ಈ ಹಿಂದೆ ವಿಟ್ಲ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತಿತ್ತು. ಬಳಿಕ ವಿಧಾನಸಭಾ ಕ್ಷೇತ್ರದ ಪುನರ್ ವಿಂಗಡನೆಯ ಬಳಿಕ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದೆ.

ಈ ಭಾಗದಲ್ಲಿ ರಸ್ತೆ, ಸೇತುವೆ ಇಲ್ಲದೆ ಜನರು ಬಹಳಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದರು. ಇದೀಗ ಪಟ್ಟೋರಿ ಲಾಡಕ್ಕೆ ಸಂಪರ್ಕಿಸುವ ನೂತನ ಕಾಂಕ್ರೀಟು ರಸ್ತೆ ಉದ್ಘಾಟನೆಗೊಂಡಿದ್ದು, ಸ್ಥಳೀಯರ ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಪಾಯಕಾರಿ, ಶಿಥಿಲಗೊಂಡ ಅಡಿಕೆ ಮರದ ಕಾಲ್ಸೇತುವೆಗೆ ಮುಕ್ತಿ ನೀಡಿ ನೂತನ ಕಾಲ್ಸೇತುವೆ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯ ವಿವಿಧ ಇಲಾಖೆಯ ಅನುದಾನದೊಂದಿಗೆ ಆದಷ್ಟು ಶೀಘ್ರವಾಗಿ ಈ ಸೇತುವೆಯ ಕಾಮಗಾರಿ ಆರಂಭಗೊಳ್ಳಲಿದ್ದು, ಕಾಮಗಾರಿ ಯಶಸ್ವಿಯಾಗಿ ಹಾಗೂ ಶೀಘ್ರವಾಗಿ ನಡೆಯಲು ಜನರ ಸಹಕಾರವೂ ಅತೀ ಅಗತ್ಯ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ತಾಲೂಕು ಪಂಚಾಯಿತಿ ಸದಸ್ಯರಾದ ಹೈದರ್ ಕೈರಂಗಳ, ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಪಟ್ಟೋರಿ ಮಸೀದಿ ಅಧ್ಯಕ್ಷ ಸೂಫಿಕುಂಞಿ ಹಾಜಿ, ಸ್ಥಳೀಯರಾದ ಗೋಪಾಲ ಬಂಗೇರ, ಜನಾರ್ದನ ಕುಲಾಲ್, ಕಾಂಗ್ರೆಸ್ ಮುಖಂಡರಾದ ನಾಸೀರ್ ನಡುಪದವು, ಮುಡಿಪು ಬ್ಲಾಕ್ ಕಾಂಗ್ರೆಸ್‌ನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಸ್ಥಳೀಯರಾದ ಸಿ.ಎಂ.ಶೆರೀಫ್ ಪಟ್ಟೋರಿ, ಇಬ್ರಾಹಿಂ ಹಾಜಿ ನಡುಪದವು, ಟಿ.ಆರ್.ಖಾದರ್ ಹಾಜಿ ನಡುಪದವು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News