ಭೂತಾಯಿ ಮಡಿಲು ಸೇರಿದ ಅಮ್ಮಾ
ಚೆನ್ನೈ,ಡಿ.6: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಇಂದು ಸಂಜೆ ಇಲ್ಲಿಯ ಮರೀನಾ ಬೀಚ್‌ನಲ್ಲಿ ಭೂತಾಯಿಯ ಮಡಿಲು ಸೇರುವುದರೊಂದಿಗೆ ಓರ್ವ ವರ್ಚಸ್ವಿ ನಾಯಕಿಯ ಯುಗಾಂತ್ಯಗೊಂಡಿತು. ಲಕ್ಷಾಂತರ ಜನರ ಸಮ್ಮುಖದಲ್ಲಿ ಅಗಲಿದ ನಾಯಕಿಯ ರಾಜಕೀಯ ಗುರು ಎಂ.ಜಿ.ರಾಮಚಂದ್ರನ್ ಅವರ ಸಮಾಧಿಯ ಪಕ್ಕದಲ್ಲಿಯೇ ಪಾರ್ಥಿವ ಶರೀರವನ್ನು ಶ್ರೀಗಂಧದ ಪೆಟ್ಟಿಗೆಯಲ್ಲಿರಿಸಿ ಸಕಲ ಸರಕಾರಿ ಗೌರವಗಳೊಂದಿಗೆ ವಸುಂಧರೆಯ ಒಡಲಿಗೆ ಅರ್ಪಿಸಲಾಯಿತು. ಜಯಲಲಿತಾರ ದೀರ್ಘ ಕಾಲದ ಆಪ್ತಗೆಳತಿ ಶಶಿಕಲಾ ನಟರಾಜನ್ ಅವರು ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದರು. ಪಾರ್ಥಿವ ಶರೀರಕ್ಕೆ ಸುತ್ತಿದ್ದ ರಾಷ್ಟ್ರಧ್ವಜವನ್ನು ಅವರು ಸ್ವೀಕರಿಸಿದರು.
ಸೆ.22ರಂದು ಉಸಿರಾಟದ ತೊಂದರೆ ಮತ್ತು ನಿರ್ಜಲೀಕರಣ ಸಮಸ್ಯೆಯಿಂದಾಗಿ ನಗರದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ(68) ರವಿವಾರ ತೀವ್ರ ಹೃದಯಾಘಾತಕ್ಕೊಳಗಾಗಿದ್ದರು. ತನ್ನನ್ನು ಉಳಿಸಿಕೊಳ್ಳಲು ವೈದ್ಯರ ತಂಡವು ಅಹೋರಾತ್ರಿ ನಡೆಸಿದ್ದ ಎಲ್ಲ ಪ್ರಯತ್ನಗಳನ್ನೂ ವಿಫಲಗೊಳಿಸಿ ಸೋಮವಾರ ರಾತ್ರಿ 11:30ಕ್ಕೆ ಚಿರನಿದ್ರೆಗೆ ಜಾರಿದ್ದರು.
ಇಂದು ಸಂಜೆ ಅಂತಿಮ ಮೆರವಣಿಗೆ ಮರೀನಾ ಬೀಚ್ ತಲುಪುತ್ತಿದ್ದಂತೆ ತಮ್ಮ ಪ್ರೀತಿಯ ‘ಅಮ್ಮ ’ನ ಅಂತಿಮ ದರ್ಶನಕ್ಕಾಗಿ ಕಾದು ನಿಂತಿದ್ದ ಲಕ್ಷಾಂತರ ಜನರ ದುಃಖದ ಕಟ್ಟೆಯೊಡೆದಿತ್ತು. ಮರೀನಾ ಬೀಚ್ ತುಂಬ ಅಳುವಿನ ಸದ್ದೇ ಕೇಳಿಬರುತ್ತಿತ್ತು. ಹಲವಾರು ಹಿರಿಯ ರಾಜಕೀಯ ನಾಯಕರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದು, ಸಹಸ್ರಾರು ಪೊಲೀಸರ ನಿಯೋಜನೆಯೊಂದಿಗೆ ಭಾರೀ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು.
ದಿವಂಗತ ಜನನಾಯಕಿಯ ಅಂತಿಮ ದರ್ಶನವನ್ನು ವ್ಯವಸ್ಥೆ ಮಾಡಿದ್ದ ಸಾರ್ವಜನಿಕ ಸಭಾಂಗಣ ರಾಜಾಜಿ ಹಾಲ್‌ನಿಂದ ಪಾರ್ಥಿವ ಶರೀರವನ್ನು ಹೊತ್ತಿದ್ದ ಸೇನಾ ವಾಹನ ಮೂರು ಕಿ.ಮೀ.ದೂರದ ಮರೀನಾ ಬೀಚ್ ತಲುಪಲು ಒಂದು ಗಂಟೆಗೂ ಹೆಚ್ಚಿನ ಸಮಯ ಹಿಡಿದಿತ್ತು. ರಾಜಾಜಿ ಹಾಲ್‌ನ ಹೊರಗಿನ ವಿಶಾಲವಾದ ಮೈದಾನವು ಭಾರೀ ಜನಸ್ತೋಮದಿಂದ ಕಿಕ್ಕಿರಿದು ತುಂಬಿತ್ತು. ಸ್ತ್ರೀಪುರುಷರೆನ್ನದೆ ಸೇರಿದ್ದ ಜನರು ಅಳುವಿನ ಜೊತೆಗೆ ಪಾರ್ಥಿವ ಶರೀರದ ಬಳಿಸಾರಲು ಹೆಣಗಾಡುತ್ತಿದ್ದರು.
ಅಂತಿಮ ಯಾತ್ರೆಯ ಮಾರ್ಗದುದ್ದಕ್ಕೂ ಸಾವಿರಾರು ಜನರು ನೆರೆದಿದ್ದು, ಪಾರ್ಥಿವ ಶರೀರವನ್ನು ಹೊತ್ತಿದ್ದ ಸೇನಾ ವಾಹನದ ಮೇಲೆ ಪುಷ್ಪಗಳ ಸುರಿಮಳೆಗೈಯುತ್ತಿದ್ದರು. ಶವಪೆಟ್ಟಿಗೆಯ ಸುತ್ತಲೂ ಜಯಲಲಿತಾರರ ದೊಡ್ಡಗಾತ್ರದ ಭಾವಚಿತ್ರಗಳನ್ನು ಇರಿಸಲಾಗಿತ್ತು. ಶವಪೆಟ್ಟಿಗೆಯ ಬಳಿ ಶಶಿಕಲಾ ನಟರಾಜನ್ ಮತ್ತು ಅವರ ಬಂಧುಗಳು ಕುಳಿತುಕೊಂಡಿದ್ದರು. ಕಳೆದ ರಾತ್ರಿ ಜಯಲಲಿತಾರ ನಿಧನದ ಬಳಿಕ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಒ.ಪನ್ನೀರ್ ಸೆಲ್ವಂ ಅವರೂ ವಾಹನದಲ್ಲಿದ್ದರು.
ಕಪ್ಪು ಉಡುಪಿನಲ್ಲಿದ್ದ ಶಶಿಕಲಾ ದಿನವಿಡೀ ಜಯಲಲಿತಾರ ಪಾರ್ಥಿವ ಶರೀರದ ಬಳಿ ನಿಂತುಕೊಂಡೇ ಇದ್ದರು. ರಾಜಾಜಿ ಹಾಲ್‌ನಲ್ಲಿ ಪಾರ್ಥಿವ ಶರೀರಕ್ಕೆ ತೊಡಿಸಿದ್ದ ಹಸಿರು ಬಣ್ಣದ ಸೀರೆಯನ್ನು ಆಗಾಗ್ಗೆ ಸರಿಪಡಿಸುತ್ತಿದ್ದರು. ಹಸಿರು ಜಯಲಲಿತಾರ ನೆಚ್ಚಿನ ಬಣ್ಣವಾಗಿದ್ದು, ಅದು ತನ್ನ ಅದೃಷ್ಟದ ಬಣ್ಣ ಎಂದು ಅವರು ನಂಬಿದ್ದರು. ಮಧ್ಯಾಹ್ನ ದಿಲ್ಲಿಯಿಂದ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ರಾಜಾಜಿ ಹಾಲ್‌ಗೆ ತೆರಳಿ ಅಗಲಿದ ನಾಯಕಿಗೆ ಅಂತಿಮ ನಮನಗಳನ್ನು ಸಲ್ಲಿಸಿದರು. ಪ್ರಧಾನಿಯವರನ್ನು ನೋಡಲು ಅಲ್ಲಿ ಸೇರಿದ್ದ ಭಾರೀ ಜನಸ್ತೋಮ ಮುಂದೊತ್ತಿ ಬಂದಿದ್ದು ಭದ್ರತಾ ವ್ಯವಸ್ಥೆಗೆ ಸತ್ವಪರೀಕ್ಷೆಯಾಗಿತ್ತು.
ತನ್ನ ವಿಮಾನದಲ್ಲಿಯ ತಾಂತ್ರಿಕ ದೋಷದಿಂದಾಗಿ ವಿಳಂಬವಾಗಿ ತಲುಪಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೂ ರಾಜಾಜಿ ಹಾಲ್‌ನಲ್ಲಿ ಜಯಲಲಿತಾರಿಗೆ ಅಂತಿಮ ಗೌರವಗಳನ್ನು ಸಲ್ಲಿಸಿದರು.
ಕರ್ನಾಟಕದ ಸಿದ್ದರಾಮಯ್ಯ, ದಿಲ್ಲಿಯ ಅರವಿಂದ ಕೇಜ್ರಿವಾಲ್, ಉತ್ತರ ಪ್ರದೇಶದ ಅಖಿಲೇಶ್ ಯಾದವ ಸೇರಿದಂತೆ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತಿತರ ಗಣ್ಯರು ಅಂತ್ಯಸಂಸ್ಕಾರದಲ್ಲಿ ಉಪಸ್ಥಿತರಿದ್ದರು.
ಜಯಲಲಿತಾರ ನಿಧನ ವಾರ್ತೆ ಹೊರಬಿದ್ದಾಗಿನಿಂದ ಯಾವುದೇ ಹಿಂಸಾಚಾರ ಸಂಭವಿಸಿಲ್ಲ ಎನ್ನುವುದು ಆಡಳಿತಕ್ಕೆ ಭಾರೀ ನಿರಾಳತೆಯನ್ನು ಒದಗಿಸಿದೆ. ತಮಿಳುನಾಡಿ ನಲ್ಲಿ ನಾಯಕರು ನಿಧನರಾದಾಗ ಅವರ ಅಭಿಮಾನಿಗಳು ಹಿಂಸೆಗೆ ಇಳಿಯುವದು, ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. 2014ರಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ಜಯಲಲಿತಾ ಬಂಧಿಸಲ್ಪಟ್ಟಾಗ ಆಕ್ರೋಶ ಮತ್ತು ದುಃಖದಿಂದಾಗಿ 200 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅವರ ಎಡಿಎಂಕೆ ಪಕ್ಷವು ಹೇಳಿತ್ತು. ಸರಕಾರಿ ಬಸ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಆಗ ಸರ್ವೋಚ್ಚ ನ್ಯಾಯಾಲಯದ ಆಗ್ರಹದ ಮೇರೆಗೆ ಜಯಲಲಿತಾ ಅವರು ಶಾಂತಿಯನ್ನು ಕಾಯ್ದುಕೊಳ್ಳುವಂತೆ ತನ್ನ ಅಭಿಮಾನಿಗಳಿಗೆ ಜೈಲಿನಿಂದಲೇ ಕರೆ ನೀಡಿದ್ದರು.
ವಿಶೇಷವಾಗಿ ಗ್ರಾಮೀಣ ಬಡಜನತೆಯ ಆರಾಧ್ಯದೈವವಾಗಿದ್ದ ಜಯಲಲಿತಾ ಅವರಿಗೆ ಮಿಕ್ಸರ್-ಗ್ರೈಂಡರ್,ಲ್ಯಾಪ್‌ಟಾಪ್‌ಗಳಂತಹ ಉಚಿತ ಕೊಡುಗೆಗಳನ್ನು ನೀಡುವ ಮೂಲಕ ತನ್ನ ಚುನಾವಣಾ ಭರವಸೆಗಳನ್ನು ಪೂರ್ಣವಾಗಿ ಈಡೇರಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಸರಕಾರವು ಅಮ್ಮಾ ಬ್ರಾಂಡ್‌ನಡಿ ಸಬ್ಸಿಡಿ ದರಗಳಲ್ಲಿ ಉಪ್ಪು, ಔಷಧಿ,ಕ್ಯಾಂಟೀನ್ ಸೌಲಭ್ಯ ಇತ್ಯಾದಿಗಳನ್ನು ರಾಜ್ಯದ ಜನರಿಗೆ ಒದಗಿಸಿತ್ತು. ಇದು ಜಯಲಲಿತಾರ ಬಗ್ಗೆ ಬಡಜನತೆಯಲ್ಲಿ ಪ್ರೀತಿಯನ್ನು ಹೆಚ್ಚಿಸಿತ್ತಾದರೂ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿತ್ತು.
ಈ ವರ್ಷದ ಆರಂಭದಲ್ಲಿ ಸತತ ಎರಡನೇ ಅವಧಿಗೆ ಮಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ಜಯಲಲಿತಾ ರಾಜ್ಯದ ಮೂರು ದಶಕಗಳ ಸಂಪ್ರದಾಯವನ್ನು ಮುರಿದಿದ್ದರು. ಇದಕ್ಕೂ ಮುನ್ನ ತಮಿಳುನಾಡು ಪ್ರತಿ ಐದು ವರ್ಷಗಳಿಗೊಮ್ಮೆ ಜಯಲಿತಾ ಮತ್ತು ಅವರ ಬದ್ಧವೈರಿ ಎಂ.ಕರುಣಾನಿಧಿ ಅವರಿಗೆ ಪರ್ಯಾಯ ಅಧಿಕಾರವನ್ನೊದಗಿಸುತ್ತ ಬಂದಿತ್ತು.