ಹಸಿವೆ ನಿವಾರಣೆ ಪ್ರಯತ್ನ: ಏಶ್ಯ-ಪೆಸಿಫಿಕ್‌ನಲ್ಲಿ ಕ್ಷೀಣಿಸುತ್ತಿರುವ ಪ್ರಗತಿ
ಹಾಂಕಾಂಗ್, ಡಿ. 6: ಜಗತ್ತಿನಾದ್ಯಂತ ಕಳೆದ ವರ್ಷ ಅಪೌಷ್ಟಿಕತೆಯಿಂದಾಗಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಆ ಪೈಕಿ ಗಮನಾರ್ಹ ಸಂಖ್ಯೆಯ ಮಕ್ಕಳು ಏಶ್ಯ-ಪೆಸಿಫಿಕ್ ವಲಯದಲ್ಲಿ ಸಾವಿಗೀಡಾಗಿದ್ದಾರೆ. ಆದರೆ, ಹಸಿವೆಯನ್ನು ನಿಭಾಯಿಸುವ ಪ್ರಕ್ರಿಯೆ ಈ ವಲಯದಲ್ಲಿ ಕ್ಷೀಣಿಸಿವೆ ಎಂಬುದನ್ನು ನೂತನ ಅಧ್ಯಯನವೊಂದು ಕಂಡುಕೊಂಡಿದೆ.
1990ರಿಂದ 2015ರ ವೇಳೆಗೆ ಏಶ್ಯ-ಪೆಸಿಫಿಕ್ ದೇಶಗಳಲ್ಲಿನ ಹಸಿದ ಹೊಟ್ಟೆಗಳ ಸಂಖ್ಯೆ ಅರ್ಧಕ್ಕಿಳಿದಿದ್ದರೂ, ಕಳೆದ 5 ವರ್ಷಗಳಲ್ಲಿ ಪ್ರಗತಿಯು ಕ್ಷೀಣಿಸಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ನಡೆಸಿದ ಅಧ್ಯಯನ ತಿಳಿಸಿದೆ.ಫಲಿತಾಂಶ ಮಂಗಳವಾರ ಬಿಡುಗಡೆಗೊಂಡಿದೆ.
‘‘ಪ್ರಗತಿ ದರ ಕಡಿಮೆ ಮಟ್ಟಕ್ಕೆ ಅಥವಾ ನಕಾರಾತ್ಮಕ ಮಟ್ಟಕ್ಕೆ ಸುಲಭವಾಗಿ ಕುಸಿಯಬಹುದು ಎನ್ನುವುದನ್ನು ಫಲಿತಾಂಶಗಳು ತೋರಿಸಿವೆ. ಇದು ಫಲಭರಿತ ವರ್ಷಗಳಲ್ಲಿ ಸಾಧಿಸಲಾದ ಮುನ್ನಡೆಯನ್ನು ನಾಶಪಡಿಸಬಹುದಾಗಿದೆ’’ ಎಂದು ವರದಿ ಹೇಳಿದೆ.
ಉದಾಹರಣೆಗೆ, ಸಂಘರ್ಷಪೀಡಿತ ಅಫ್ಘಾನಿಸ್ತಾನದಲ್ಲಿ ಹಸಿವೆ ದರ 2003ರಿಂದ 2008ರ ವೇಳೆಗೆ 8.7 ಶೇಕಡದಷ್ಟು ಕಡಿಮೆಯಾಗಿದೆ. ಆದರೆ ಅಲ್ಲಿ 2010 ರಿಂದ 2015ರವರೆಗಿನ ಪ್ರವೃತ್ತಿಯು ತಿರುವುಮುರುವಾಗಿದೆ.