ಬಾಬರಿ ಮಸೀದಿ ಧ್ವಂಸ; ಸಂವಿಧಾನ ಮೂಲೆಗುಂಪು: ಜಿ.ರಾಜಶೇಖರ್
ಉಡುಪಿ, ಡಿ.6: ಈ ದೇಶದಲ್ಲಿ ಎಲ್ಲ ಜಾತಿ ಧರ್ಮದವರು ಸಮಾನರು ಎಂಬುದಾಗಿ ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಆ ಸಂವಿಧಾನವನ್ನೇ ಮೂಲೆಗುಂಪು ಮಾಡಿ ಬಾಬರಿ ಮಸೀದಿಯನ್ನು ಧ್ವಂಸ ಗೈಯ್ಯಲಾಯಿತು. ಇದು ಭಾರತದಲ್ಲಿ ಸಂವಿಧಾನ ಹಾಗೂ ಕಾನೂನಿನ ಆಳ್ವಿಕೆ ಸತ್ತು ಹೋಗಿದೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಹಿರಿಯ ಚಿಂತಕ ಹಾಗೂ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಟೀಕಿಸಿದ್ದಾರೆ.
ಉಡುಪಿ ಜಿಲ್ಲಾ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ರ ಪರಿನಿರ್ವಾಣ ಮತ್ತು ಬಾಬರಿ ಮಸೀದಿಯ ಧ್ವಂಸದ ನೆನಪಿನಲ್ಲಿ ಮಂಗಳವಾರ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅವರು ಅಂಬೇಡ್ಕರ್‌ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡುತಿದ್ದರು.
ಇಂದಿಗೂ ಆ ಘೋರ ಘಟನೆಯ ಆರೋಪಿಗಳಿಗೆ ಯಾವುದೇ ಶಿಕ್ಷೆ ಆಗಿಲ್ಲ. ಹಾಡುಹಗಲೇ ಮಸೀದಿ ಉರುಳಿಸುವ ಕೆಲಸ ನಡೆದಿದ್ದರೂ ಸಾಕ್ಷಾಧಾರದ ಕೊರತೆ ಹೇಳಿ ಎಲ್ಲರನ್ನು ಖುಲಾಸೆ ಮಾಡಲಾಯಿತು. ಈ ಮೂಲಕ ನಮ್ಮ ದೇಶದ ಜನರ ಆತ್ಮಸಾಕ್ಷಿ ಸತ್ತು ಹೋಗಿದೆ. ನ್ಯಾಯಾಲಯ ನ್ಯಾಯ ತೀರ್ಮಾನದಲ್ಲಿ ಸೋತಿದೆ. ಸಂವಿಧಾನ ಅಂಗಾಂಗ ಕಳೆದುಕೊಂಡು ಹೆಣವಾಗಿದೆ. ಒಟ್ಟಾರೇ ಇಡೀ ಸಂವಿಧಾನವನ್ನೇ ಬುಡಮೇಲು ಮಾಡ ಲಾಗಿದೆ ಎಂದು ಅವರು ಆರೋಪಿಸಿದರು.
ಬಾಬರಿ ಮಸೀದಿ ಒಂದು ಸಮುದಾಯದ ಪವಿತ್ರ ಪ್ರಾರ್ಥನಾ ಕೇಂದ್ರ. ಈ ಪವಿತ್ರ ಸ್ಥಳ ಸಂಘಪರಿವಾರಕ್ಕೆ ಅನುಮಾನದ ತಾಣವಾಗಿತ್ತು. ಅದೇ ಕಾರಣಕ್ಕೆ ಆ ಮಸೀದಿಯನ್ನು ಉರುಳಿಸಲಾಯಿತು. ಇದರ ಹಿಂದೆ ಸಂಘ ಟಿತ ಪ್ರಯತ್ನ ಕೂಡ ನಡೆದಿತ್ತು. ಅದರಲ್ಲಿ ಉಡುಪಿಯದ್ದು ಕೂಡ ಬಹಳ ದೊಡ್ಡ ಪಾತ್ರ ಇತ್ತು ಎಂದರು.
ಬಾಬರಿ ಮಸೀದಿಯ ಧ್ವಂಸದ ಶೋಕ ಆಚರಣೆಯ ಜೊತೆ ನಾವು ಇಂದು ಮುಂಬೈ ಹಿಂಸಾಚಾರ, ಸಿಖ್ ನರಮೇಧ, ಗುಜರಾತ್ ಹತ್ಯಾಕಾಂಡ ಮತ್ತು ಸಂವಿಧಾನದ ಶೋಕ ಆಚರಣೆಯನ್ನೂ ಕೂಡ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಸುಂದರ್ ಮಾಸ್ತರ್ ವಹಿಸಿದ್ದರು. ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಹುಸೇನ್ ಕೋಡಿಬೆಂಗ್ರೆ, ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ಖಲೀಲ್ ಅಹ್ಮದ್ ಉಪಸ್ಥಿತರಿದ್ದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕಾರ್ಯದರ್ಶಿ ದಿನಕರ ಬೆಂಗ್ರೆ ಸ್ವಾಗತಿಸಿದರು. ದಸಂಸ(ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಎಸ್.ಎಸ್.ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ್‌ದಾಸ್ ಚೇಂಡ್ಕಳ ಕಾರ್ಯಕ್ರಮ ನಿರೂಪಿಸಿದರು