ಅಂಗನವಾಡಿ ಕಾರ್ಯಕರ್ತೆ ಸಂಘದ ಅಧ್ಯಕ್ಷೆ ದೋಷಮುಕ್ತಿ
ಕುಂದಾಪುರ, ಡಿ.6: ವಿಧಾನಸಭೆ ಮತದಾರರ ಪಟ್ಟಿಯ ಗುಣಮಟ್ಟ ಹೆಚ್ಚಿಸುವ ಬಗ್ಗೆ ಮನೆ-ಮನೆಗೆ ಭೇಟಿ ನೀಡಲು ನಿರಾಕರಿಸಿ, ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪಗಳಿಂದ ಅಂಗನವಾಡಿ ಸಂಘಟನೆಯೊಂದರ ಅಧ್ಯಕ್ಷೆ, ಇಲ್ಲಿನ ರಾಮಮಂದಿರ ಸಮೀಪದ ನಿವಾಸಿ ಕೆ.ಉಷಾ ರವಿರಾಜ್ ನಾಯ್ಕ ದೋಷಮುಕ್ತಗೊಂಡಿದ್ದಾರೆ.
ಈ ಬಗ್ಗೆ ನೋಟೀಸು ನೀಡಲು ಬಂದಿದ್ದ ಕುಂದಾಪುರದ ಅಂದಿನ ಗ್ರಾಮ ಲೆಕ್ಕಾಧಿಕಾರಿ ಎನ್.ಬಿ.ಜಾಧವ ಅವರ ಜೊತೆ ಕೂಡಾ ಉಷಾ ದುರ್ವರ್ತನೆ ತೋರಿದ ಆರೋಪವೂ ಇತ್ತು. ಚುನಾವಣಾ ಕರ್ತವ್ಯ ಗತ್ಯ ಸೇವೆಯಾಗಿದ್ದು, ಆರೋಪ ಸಾಬೀತಾದರೆ ಕನಿಷ್ಠ ಮೂರು ತಿಂಗಳು ಹಾಗೂ ಎರಡು ವರ್ಷಕ್ಕೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಆರೋಪಿ ಉಷಾ ತನ್ನ ಸಂಘಟನೆಯ ಇತರ 26 ಕಾರ್ಯಕರ್ತೆಯರನ್ನು ಕೂಡಾ ಚುನಾವಣಾ ಕಾರ್ಯ ನಿರ್ವಹಿಸದಂತೆ 2008ರ ಜ.9ರಂದು ಪ್ರಚೋದಿಸಿದ್ದಾಳೆ ಎಂಬ ಆರೋಪವೂ ಆಕೆಯ ಮೇಲಿತ್ತು. ಆರೋಪಿ ಉಷಾ ತನ್ನ ಸಂಘಟನೆಯ ಇತರ 26 ಕಾರ್ಯಕರ್ತೆಯರನ್ನು ಕೂಡಾ ಚುನಾವಣಾ ಕಾರ್ಯ ನಿರ್ವಹಿಸದಂತೆ 2008ರ ಜ.9ರಂದು ಪ್ರಚೋದಿಸಿದ್ದಾಳೆ ಎಂಬ ಆರೋಪವೂ ಇತ್ತು.
ಆರೋಪಿತೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಗೌರವಧನ ಪಡೆಯುವ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಕಂದಾಯ ಇಲಾಖೆಯ ನೌಕರಳಲ್ಲ.ದೂರುದಾರರಾದ ಎಚ್.ಎನ್.ಅರುಣಪ್ರಭಾ ಅಂಗನವಾಡಿ ಕಾರ್ಯಕರ್ತೆಯರಿಗೆ ನೇರವಾಗಿ ಆದೇಶ ಮಾಡಲು ಅಧಿಕಾರಸ್ಥರಲ್ಲ. ಆಕೆಗೆ ಆಕೆಯ ಇಲಾಖಾ ಮುಖ್ಯಸ್ಥರಿಂದ ಆದೇಶ ಮಾಡಿಸಬೇಕು. ಈ ಸೂಕ್ಷ್ಮವನ್ನು ಗಮನಿಸದೇ ತಮಗೆ ಅಧಿಕಾರವಿಲ್ಲದಿದ್ದರೂ ದೂರು ದಾಖಲಿಸಿ ತನಿಖೆ ಮಾಡಿ, ಚಾರ್ಜ್‌ಶೀಟ್ ಸಲ್ಲಿಸಿ ಕುಂದಾಪುರ ಪೊಲೀಸರು ತಪ್ಪು ಮಾಡಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಅಂಗನವಾಡಿ ಕಾರ್ಯಕರ್ತೆಯ ಕರ್ತವ್ಯ ವ್ಯಾಪ್ತಿ ಹಾಗೂ ಜವಾಬ್ದಾರಿಯ ಬಗ್ಗೆ ಮಹತ್ವದ್ದಾದ ಈ ತೀರ್ಪಿನ ಪ್ರಕರಣದಲ್ಲಿ ಆರೋಪಿತೆ ಉಷಾ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು