ಕ್ಯಾನ್ಸರ್ ಕುರಿತು ಜಾಗೃತಿ ತರಬೇತಿ
ಮಂಗಳೂರು, ಡಿ.6: ಯೆನೆಪೊಯ ವಿಶ್ವವಿದ್ಯಾನಿಲಯವು ಕ್ಯಾನ್ಸರ್ ಕುರಿತು ವ್ಯಾಪಕ ಜನ ಜಾಗೃತಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಭಾಗವಾಗಿ ದ.ಕ. ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದಲ್ಲಿ ಮಂಗಳೂರು ತಾಲೂಕಿನ 200 ಪ್ರೌಢಶಾಲಾ ಶಿಕ್ಷಕರಿಗೆ ಡಿ.7ರಂದು ಕ್ಯಾನ್ಸರ್ ಜಾಗೃತಿ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ತರಬೇತಿಯ ಬೆಳಗ್ಗಿನ ಅಧಿವೇಶನದಲ್ಲಿ ಕ್ಯಾನ್ಸರ್ ಕಾಯಿಲೆ, ಕಾರಣಗಳು, ಗುಣ ಲಕ್ಷಣಗಳು, ಕ್ಯಾನ್ಸರ್‌ನ ವಿವಿಧ ವರ್ಗಗಳು, ಪ್ರಾರಂಭದಲ್ಲಿ ಪತ್ತೆ ಹಚ್ಚುವ ವಿಧಾನ, ಚಿಕಿತ್ಸೆ ಹಾಗೂ ನಿಯಂತ್ರಣ ಕುರಿತು ಅನುಭವಿ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ಮಧ್ಯಾಹ್ನದ ನಂತರದ ಅಧಿವೇಶನದಲ್ಲಿ ಯೆನೆಪೊಯ ವಿವಿ ಉಪಕುಲಪತಿ ಹಾಗೂ ಪ್ರಖ್ಯಾತ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಎಂ.ಜಯಕುಮಾರ್ ಸಂವಾದ ನಡೆಸಿಕೊಡಲಿದ್ದು, ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.